ನ್ಯೂಯಾರ್ಕ್: ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಭಾರತ ಇಳಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಬ್ರೀಟ್‌ಬಾಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಭಾರತ-ಅಮೆರಿಕ ನಡುವಣ ಸಂಬಂಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ಕಳೆದ ತಿಂಗಳು ನರೇಂದ್ರ ಮೋದಿಯವರೊಂದಿಗಿನ ಭೇಟಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ನನಗೆ ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ' ಎಂದು ಹೇಳಿದ್ದಾರೆ.
'ಆದರೆ ಭಾರತದೊಂದಿಗೆ ನನಗಿರುವ ಒಂದೇ ಒಂದು ಸಮಸ್ಯೆ ಏನೆಂದರೆ, ಜಗತ್ತಿನಲ್ಲಿ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಅವರೂ ಒಬ್ಬರು' ಎಂದು ಹೇಳಿದ್ದಾರೆ.
'ಅವರು ತೆರಿಗೆಯನ್ನು ಗಣನೀಯವಾಗಿ ಪ್ರಮಾಣದಲ್ಲಿ ಇಳಿಕೆ ಮಾಡುತ್ತಾರೆ ಎಂದು ನಾನು ನಂಬಿದ್ದೇನೆ. ಏಪ್ರಿಲ್ 2 ರ ಬಳಿಕ ಅವರು ವಿಧಿಸಿದಷ್ಟೇ ಸುಂಕವನ್ನು ನಾವೂ ಹೇರುತ್ತೇವೆ' ಎಂದು ಟ್ರಂಪ್ ನುಡಿದಿದ್ದಾರೆ.
ಭಾರತ-ಮಧ್ಯಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರ್ ಅನ್ನು 'ಅದ್ಭುತ ದೇಶಗಳ ಒಕ್ಕೂಟ' ಎಂದು ಬಣ್ಣಿಸಿರುವ ಟ್ರಂಪ್, ನಮ್ಮ ಪಾಲುದಾರರು ನಮ್ಮನ್ನು ಕೆಟ್ಟದಲ್ಲಿ ನಡೆಸಿಕೊಳ್ಳುವುದನನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ನಾವು ನಮ್ಮ ಸ್ನೇಹಿತರಿಗೆ ಒಳಿತನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೆಲವೊಮ್ಮೆ ನಮ್ಮ ಸ್ನೇಹಿತರಲ್ಲದವರು, ನಮ್ಮನ್ನು ಸ್ನೇಹಿತರಿಗಿಂತ ಚೆನ್ನಾಗಿ ನಡೆಸಿಕೊಳ್ಳುತ್ತಾತೆ. ಉದಾಹರಣೆಗೆ ಐರೋಪ್ಯ ಒಕ್ಕೂಟ ವ್ಯಾಪಾರದಲ್ಲಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.