ಲಂಡನ್: 'ನನ್ನ ದೇಶಕ್ಕೆ ಭದ್ರತಾ ಖಾತರಿ ನೀಡದೆ ಜಾರಿಗೊಳಿಸುವ ಕದನ ವಿರಾಮವು ರಷ್ಯಾದ ಆಕ್ರಮಣವನ್ನು ಶಾಶ್ವತವಾಗಿ ಅಂತ್ಯಗೊಳಿಸುವುದಿಲ್ಲ. ಯುದ್ಧದ ಅಂತ್ಯವು ಇನ್ನೂ ಬಹಳ ದೂರ ಇದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರತಿಪಾದಿಸಿದರು.
ಲಂಡನ್‌ನಲ್ಲಿ ಯುರೋಪಿನ ಮಿತ್ರ ರಾಷ್ಟ್ರಗಳ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಕದನ ವಿರಾಮದಿಂದ ಯುದ್ಧ ಅಂತ್ಯವಾಗುತ್ತದೆ ಅನಿಸುವುದಿಲ್ಲ' ಎಂದರು.
ಕದನ ವಿರಾಮದ ಪ್ರಸ್ತಾವ:
ಉಕ್ರೇನ್ ಜತೆಗಿನ ಮಾತುಕತೆಯ ಬಳಿಕ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್, 'ಒಂದು ತಿಂಗಳ ಮಟ್ಟಿಗೆ ಉಕ್ರೇನ್‌ನ ವಾಯು ಪ್ರದೇಶ, ಸಮುದ್ರ ಪ್ರದೇಶ ಮತ್ತು ಇಂಧನ ಮೂಲಸೌಕರ್ಯ ಪ್ರದೇಶಗಳಿಗೆ ಅನ್ವಯವಾಗುವಂತೆ ಕದನ ವಿರಾಮದ ಪ್ರಸ್ತಾವವನ್ನು ಮಾಡಿದ್ದೇವೆ' ಎಂದು ತಿಳಿಸಿದರು.
'ಉಕ್ರೇನ್‌ಗೆ ಭದ್ರತಾ ಖಾತರಿ ನೀಡದೆ ಮಿತ್ರ ರಾಷ್ಟ್ರಗಳು ಕದನ ವಿರಾಮಕ್ಕೆ ಒತ್ತಾಯಿಸಿದರೆ, ಅದು ವಿಫಲವಾಗುತ್ತದೆ. ಏಕೆಂದರೆ ರಷ್ಯಾ ಒಪ್ಪಂದವನ್ನು ಮುರಿಯುತ್ತದೆ. ಆಗ ಉಕ್ರೇನ್ ಪ್ರತೀಕಾರ ತೀರಿಸಿಕೊಳ್ಳುತ್ತದೆ' ಎಂದು ಝೆಲೆನ್‌ಸ್ಕಿ ನುಡಿದರು.
'ವಾರದ ಬಳಿಕ ಏನಾಗುತ್ತದೆ ಎಂಬುದನ್ನು ಊಹಿಸಿ. ರಷ್ಯನ್ನರು ನಮ್ಮ ಮೇಲೆ ದಾಳಿ ನಡೆಸುತ್ತಾರೆ. ನಾವೂ ಅವರ ವಿರುದ್ಧ ಹೋರಾಡುತ್ತೇವೆ. ಯಾರು ಮೊದಲು ಗುಂಡು ಹಾರಿಸಿದರು ಎಂಬುದರ ಸುತ್ತ ಚರ್ಚೆಯಾಗುತ್ತಾ ವರ್ಷಗಳ ಕಾಲ ಹೋರಾಟ ಮುಂದುವರಿಯುತ್ತದೆ. ಇದರಿಂದ ಯಾರಿಗೆ ಪ್ರಯೋಜನ? ಸಹಜವಾಗಿ ರಷ್ಯಾಗೆ ಅನುಕೂಲವಾಗುತ್ತದೆಯೇ ಹೊರತು ಉಕ್ರೇನ್‌ಗಲ್ಲ' ಎಂದು ಅವರು ತಿಳಿಸಿದರು.
ವಾಷಿಂಗ್ಟನ್‌ನಲ್ಲಿ ಶುಕ್ರವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಡುವೆ ನಡೆದ ವಾಗ್ವಾದದ ಬಳಿಕ, ಝೆಲೆನ್‌ಸ್ಕಿ ಅವರು ಉದ್ದೇಶಿತ ಕದನ ವಿರಾಮದ ನಿಯಮಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಉಕ್ರೇನ್‌ಗೆ ಭದ್ರತಾ ಖಾತರಿ ನೀಡುವಂತೆ ಒತ್ತಾಯಿಸಿದ್ದರು.
ಈ ಸಭೆಯಲ್ಲಿ ಝೆಲೆನ್‌ಸ್ಕಿ ಅವರು ಉಕ್ರೇನ್‌ನ ಖನಿಜ ಸಂಪನ್ಮೂಲದ ಹಕ್ಕುಗಳ ಹಂಚಿಕೆ ಕುರಿತು ಪ್ರಾಥಮಿಕ ಒಪ್ಪಂದಕ್ಕೆ ಸಹಿ ಮಾಡದೆ ಶ್ವೇತಭವನದಿಂದ ತೆರಳಿದ್ದರು.
'ದೇಶದಲ್ಲಿನ ಖನಿಜ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದಂತೆ ಅಮೆರಿಕದ ಜತೆ ಒಪ್ಪಂದ ಮಾಡಿಕೊಳ್ಳಲು ಉಕ್ರೇನ್ ಸಿದ್ಧವಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು 'ಉದ್ದೇಶಿತ ಒಪ್ಪಂದಕ್ಕೆ ಸಂಬಂಧಿಸಿದವರೆಲ್ಲ ಒಪ್ಪಿಗೆ ಸೂಚಿಸಿದರೆ ಸಹಿ ಮಾಡಲು ಸಿದ್ಧ' ಎಂದರು. 'ಯುದ್ಧದ ಸಂದರ್ಭದಲ್ಲಿ ಅಮೆರಿಕ ನೀಡುತ್ತಿರುವ ಬೆಂಬಲಕ್ಕಾಗಿ ನಾವು ಕೃತಜ್ಞತೆ ಸಲ್ಲಿಸದೇ ಇರುವ ದಿನವೇ ಇಲ್ಲ. ಅಮೆರಿಕದ ಜತೆಗೆ ಇನ್ನೂ ಹೆಚ್ಚಿನ ರಾಜತಾಂತ್ರಿಕ ಮಾತುಕತೆ ನಡೆಸುವುದಾಗಿ' ಅವರು ಭರವಸೆ ನೀಡಿದರು.ಅಮೆರಿಕದ ಜತೆ ಒಪ್ಪಂದಕ್ಕೆ ಸಿದ್ಧ 'ನನ್ನನ್ನು ಬದಲಿಸುವುದು ಸುಲಭವಲ್ಲ. ಆದರೆ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡಿದರೆ ಅಧಿಕಾರದಿಂದ ಕೆಳಗಿಳಿಯುವುದಾಗಿ' ಝೆಲೆನ್‌ಸ್ಕಿ ಪುನರುಚ್ಚರಿಸಿದ್ದಾರೆ. ಅಮೆರಿಕದ ಕೆಲ ಹಿರಿಯ ರಿಪಬ್ಲಿಕನ್ನರು ಝೆಲೆನ್‌ಸ್ಕಿ ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. 'ಅಮೆರಿಕದ ಜತೆಗೆ ವ್ಯವಹರಿಸುವ ಅಂತಿಮವಾಗಿ ರಷ್ಯಾ ಜತೆಗೂ ವ್ಯವಹರಿಸುವ ಮತ್ತು ಈ ಯುದ್ಧವನ್ನು ಕೊನೆಗೊಳಿಸಲು ಬಯಸುವ ನಾಯಕನ ಅಗತ್ಯವಿದೆ' ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಆಗ್ರಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಝೆಲೆನ್‌ಸ್ಕಿ 'ಅವರು ನನ್ನನ್ನು ಬದಲಿಸ ಬಯಸಿದ್ದರೆ ನಮ್ಮ ದೇಶಕ್ಕೆ ಏನನ್ನು ನೀಡುತ್ತಾರೆ? ಬೆಂಬಲ ನೀಡುತ್ತಾರೆಯೇ' ಎಂದು ಪ್ರಶ್ನಿಸಿದ ಅವರು 'ಹಾಗೆಲ್ಲ ಸುಮ್ಮನೇ ನನ್ನನ್ನು ಬದಲಿಸುವುದು ಸರಳವಲ್ಲ' ಎಂದು ಪ್ರತಿಕ್ರಿಯಿಸಿದರು. 'ಚುನಾವಣೆ ಆಯೋಜಿಸುವುದಷ್ಟೇ ಇದಕ್ಕೆ ಸಾಕಾಗುವುದಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಹೀಗಾಗಿ ನೀವು ನನ್ನ ಜತೆ ಮಾತುಕತೆ ನಡೆಸುವುದೇ ಸೂಕ್ತ' ಎಂದು ಅವರು ಅಭಿಪ್ರಾಯಪಟ್ಟರು. 'ನ್ಯಾಟೊಗಾಗಿ ನಾನು ಬದಲಾಗಲು ಸಿದ್ಧ. ಅದು ಸಾಧ್ಯವಾದರೆ ನನ್ನ ಯೋಜನೆ ಪೂರ್ಣಗೊಂಡಂತೆ' ಎಂದು ಅವರು ಪ್ರತಿಪಾದಿಸಿದರು. '2024ರಲ್ಲಿ ಚುನಾವಣೆ ಎದುರಿಸದ ಝೆಲೆನ್‌ಸ್ಕಿ ಅವರು ಉಕ್ರೇನ್‌ನ ಕಾನೂನುಬದ್ಧ ಅಧ್ಯಕ್ಷರಾಗಿ ಉಳಿದಿಲ್ಲ' ಎಂದು ರಷ್ಯಾ ಪ್ರತಿಪಾದಿಸುತ್ತಿದೆ. ಉಕ್ರೇನ್‌ನಲ್ಲಿ ಸೇನಾ ಕಾನೂನು ಜಾರಿಯಾಗಿರುವ ಕಾರಣ ಚುನಾವಣೆಯನ್ನು ತಡೆಹಿಡಿಯಲಾಗಿದೆ.'ನನ್ನ ಬದಲಿಸುವುದು ಸುಲಭವಲ್ಲ':