ಟೊರೊಂಟೊ: ಕೆನಡಾದ ಆಡಳಿತಾರೂಢ ಲಿಬರಲ್ ಪಕ್ಷವು ತಮ್ಮ ನಾಯಕರಾಗಿ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮಾರ್ಕ್ ಕಾರ್ನಿ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಅವರು ಕೆನಡಾದ ಮುಂದಿನ ಪ್ರಧಾನಿಯಾಗಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಯುದ್ಧ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಮತ್ತು ಫೆಡರಲ್ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಆದರೂ ಅವರು ಹೊಸ ಪ್ರಧಾನಿ ಆಯ್ಕೆವರೆಗೆ ಹಂಗಾಮಿ ಪ್ರಧಾನಿಯಾಗಿ ಮುಂದುವರಿದಿದ್ದರು. ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸ್ಥಾನವನ್ನು 59 ವರ್ಷದ ಕಾರ್ನಿ ವಹಿಸಿಕೊಂಡಿದ್ದಾರೆ.
ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷರಾಗಿದ್ದ ಕಾರ್ನಿ ಹಣಕಾಸು ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 2008ರ ಆರ್ಥಿಕ ಬಿಕ್ಕಟ್ಟಿನಿಂದ ಕೆನಡಾ ಇತರ ಹಲವು ದೇಶಗಳಿಗಿಂತ ವೇಗವಾಗಿ ಚೇತರಿಸಿಕೊಂಡ ನಂತರ ಅವರ ನೇಮಕಾತಿ ಪ್ರಶಂಸೆಗೆ ಪಾತ್ರವಾಗಿತ್ತು.
ಆಹಾರ ಮತ್ತು ವಸತಿ ವಲಯದ ಬೆಲೆ ಏರಿಕೆ,, ವಲಸೆ ಹೆಚ್ಚಾಗಿದ್ದೇ ಟ್ರುಡೊ ತಲೆದಂಡಕ್ಕೆ ಕಾರಣ ಎಂದು ವಿರೋಧ ಪಕ್ಷ ಕನ್ಸರ್ವೇಟಿವ್ ಪಕ್ಷ ಹೇಳಿದೆ.
ಟ್ರಂಪ್ ಅವರ ವ್ಯಾಪಾರ ಯುದ್ಧ ಮತ್ತು ಕೆನಡಾವನ್ನು 51ನೇ ಅಮೆರಿಕ ರಾಜ್ಯವನ್ನಾಗಿ ಮಾಡುವ ಅವರ ಮಾತು ಕೆನಡಿಯನ್ನರನ್ನು ಕೆರಳಿಸಿದೆ. ಕೆನಡಾದ ಹಲವರು ಅಮೆರಿಕ ಪ್ರವಾಸ ರದ್ದುಗೊಳಿಸಿದ್ದರೆ, ಮತ್ತೆ ಕೆಲವರು ಅಮೆರಿಕ ವಸ್ತುಗಳ ಖರೀದಿ ನಿಲ್ಲಿಸುತ್ತಿದ್ದಾರೆ.