ರಾಯ್‌ಪುರ: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಮತ್ತು ಅವರ ಪುತ್ರನ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರ ವಿರುದ್ಧದ ಅಬಕಾರಿ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.
ರಾಜ್ಯದಲ್ಲಿ 14ರಿಂದ 15 ಸ್ಥಳಗಳಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಇ.ಡಿ. ದಾಳಿ ನಡೆದಿದೆ.
ಭೂಪೇಶ್ ಮತ್ತು ಚೈತನ್ಯ ಅವರು ಒಟ್ಟಿಗೆ ವಾಸವಿರುವ ಭಿಲಾಯ್‌ನಲ್ಲಿನ ನಿವಾಸ, ಚೈತನ್ಯ ಅವರ ಆಪ್ತರಾದ ಲಕ್ಷ್ಮಿ ನಾರಾಯಣ್ ಬನ್ಸಾಲ್ ಅಲಿಯಾಸ್ ಪಪ್ಪು ಬನ್ಸಾಲ್ ಮತ್ತು ಇತರ ಕೆಲವರ ನಿವಾಸದಲ್ಲಿ ಶೋಧ ಕಾರ್ಯ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಹಲವು ಮಂದಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಘೇಲ್ ಅವರ ನಿವಾಸದ ಬಳಿ ಜಮಾಯಿಸಿ, ಇ.ಡಿ ವಿರುದ್ಧ ಪ್ರತಿಭಟನೆ ನಡೆಸಿದರು.
'ಇದು ಕೇಂದ್ರ ಸರ್ಕಾರದ ಪಿತೂರಿ. ಸುಂಕ, ಆರ್ಥಿಕತೆ ಕುಸಿತ, ಮತದಾರರ ಪಟ್ಟಿಯಲ್ಲಿನ ಅಕ್ರಮ ಇತ್ಯಾದಿ ವಿಷಯಗಳಿಂದ ದೇಶದ ಜನರ ಗಮನ ಬೇರೆಡೆ ಸೆಳೆಯಲು ಈ ದಾಳಿಗಳನ್ನು ನಡೆಸಲಾಗಿದೆ. ಕಾಂಗ್ರೆಸ್ ಅಥವಾ ನಮ್ಮ ಯಾವುದೇ ನಾಯಕರನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು' ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ 'ಎಕ್ಸ್' ಮಾಡಿದ್ದಾರೆ.