ಕುಂಬಳೆ: ತನ್ನ ಅಮಾಯಕ ಪುತ್ರನನ್ನು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತಾಯಿಯೊಬ್ಬಳು ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡಿದ್ದಾರೆ.
ತನ್ನ ಪುತ್ರ ಸಿಎಂ ಮುಹಮ್ಮದ್ ಫಿರೋಜ್ ವಿರುದ್ಧದ ಎಂಡಿಎಂಎ ಪ್ರಕರಣದಲ್ಲಿ ಬಂಧಿಸಿರುವುದರ ಹಿಂದೆ ಪಿತೂರಿ ಇದೆ ಎಂದು ತಾಯಿ ಮೈಮುನಾ ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬುಧವಾರ ಮಂಜೇಶ್ವರ ಎಸ್.ಐ ನೇತೃತ್ವದಲ್ಲಿ, ಉಪ್ಪಳ ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ
ದಾಳಿಯಲ್ಲಿ ಸಿಎಂ ಮುಹಮ್ಮದ್ ಫಿರೋಜ್ ನನ್ನು ಬಂಧಿಸಲಾಯಿತು. ಪೋಲೀಸರನ್ನು ಒಬ್ಬ ಸ್ನೇಹಿತ ಮೋಸಗೊಳಿಸಿದನು. ಎಸ್‍ಐ ತನ್ನ ಪುತ್ರನ ಪ್ಯಾಂಟ್ ಜೇಬಿನಲ್ಲಿ ಕೈ ಇರಿಸಿ ಎಂಡಿಎಂಎ ಪ್ಯಾಕೆಟ್ ತೆಗೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ. ಈ ಬಗ್ಗೆ ಪುತ್ರ ಪೋಲೀಸರಿಗೆ ತನ್ನ ನಿರಪರಾದಿತ್ವವನ್ನು ಹೇಳುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ಪಾದರಕ್ಷೆಗಳ ವ್ಯಾಪಾರ ನಡೆಸುವ ಪುತ್ರ ಯಾವುದೇ ಪ್ರಕರಣದಲ್ಲಿ ಈ ವರೆಗೂ ಆರೋಪಿಯಾಗಿಲ್ಲ. ತಮ್ಮ ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರಲ್ಲಿ ತನ್ನ ಪುತ್ರನ ಬಗ್ಗೆ ಯಾವುದೇ ನಕಾರಾತ್ಮಕ ಅಭಿಪ್ರಾಯಗಳಿಲ್ಲ.
ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ತನ್ನ ಮಗ ಮಾದಕ ದ್ರವ್ಯಗಳನ್ನು ಬಳಸಿರುವನೇ ಅಥವಾ ಪೋನ್ ಕರೆ ತನಿಖೆಯ ಸಮಯದಲ್ಲಿ ಅವನು ಮಾದಕ ದ್ರವ್ಯಗಳನ್ನು ಮಾರಾಟ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಾಯಿ ಹೇಳಿದ್ದಾರೆ.
ತನ್ನ ಪುತ್ರ ತಪ್ಪಿತಸ್ಥನೆಂದು ಸಾಬೀತಾದರೆ, ಅಂತಹ ಮಗನನ್ನು ತಾನು ಬಯಸುವುದಿಲ್ಲ ಮತ್ತು ಗರಿಷ್ಠ ಶಿಕ್ಷೆಯನ್ನು ನೀಡಲು ಒಪ್ಪುವೆ ಎಂದು ಅವರು ಸ್ಪಷ್ಟಪಡಿಸಿದರು. ಪುತ್ರನ ಮೇಲಿನ ಆರೋಪ ನಿರಾಧಾರ, ಅಸತ್ಯ ಎಂದು ಸಾಬೀತಾಗುವವರೆಗೂ ಆರೋಪ ಹೊರಿಸಿದವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಮೈಮೂನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.