ದುಬೈ: ಪದಚ್ಯುತ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರ ಬೆಂಬಲಿಗರ ವಿರುದ್ಧದ ಸೇನಾ ಕಾರ್ಯಾಚರಣೆ ಕೊನೆಗೊಂಡಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ. ಎರಡು ದಿನಗಳ ಘರ್ಷಣೆಯಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಅಲ್ಪಸಂಖ್ಯಾತ ಅಲಾವಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಸಿರಿಯಾದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.
'ಭದ್ರತಾ ಪಡೆಯ ಕಾರ್ಯಾಚರಣೆ ಕೊನೆಗೊಂಡಿದ್ದು, ಘರ್ಷಣೆ ನಡೆದ ಪ್ರದೇಶಗಳಲ್ಲಿ ಜನಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಆರಂಭಿಸಲಾಗಿದೆ' ಎಂದು ರಕ್ಷಣಾ ಸಚಿವಾಲಯದ ವಕ್ತಾರ ಅಬ್ದುಲ್ ಘನಿ ಹೇಳಿದ್ದಾರೆ.
ಅಸಾದ್ ಸರ್ಕಾರದ ಬೆಂಬಲಿಗರ ವಿರುದ್ಧ ಹೋರಾಡಲು ಮತ್ತು ಭವಿಷ್ಯದಲ್ಲಿ ಅವರಿಂದ ಯಾವುದೇ ಬೆದರಿಕೆ ಎದುರಾಗುವುದನ್ನು ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘರ್ಷಣೆ ಹಾಗೂ ಪ್ರತೀಕಾರದ ಹತ್ಯೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಸಿರಿಯಾದಲ್ಲಿರುವ ಬ್ರಿಟನ್ ಮೂಲದ ಮಾನವ ಹಕ್ಕುಗಳ ನಿಗಾ ಸಂಸ್ಥೆ ಹೇಳಿದೆ. 745 ನಾಗರಿಕರು, ಸಿರಿಯಾ ಭದ್ರತಾ ಪಡೆಗಳ 125 ಸಿಬ್ಬಂದಿ ಮತ್ತು ಅಸಾದ್ ಅವರನ್ನು ಬೆಂಬಲಿಸುವ 148 ಹೋರಾಟಗಾರರು ಮೃತರಲ್ಲಿ ಸೇರಿದ್ದಾರೆ.