ಡೆಹ್ರಾಡೂನ್: 'ಹಿಂದೂಯೇತರ'ರು ಕೇದಾರನಾಥ ಧಾಮದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧಿಸಬೇಕು ಎಂದು ಬಿಜೆಪಿ ಶಾಸಕಿ ಆಶಾ ನೌಟಿಯಾಲ್ ಅವರು ಒತ್ತಾಯಿಸಿದ್ದಾರೆ.
ಕೇದಾರನಾಥ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಆಶಾ ನೌಟಿಯಾಲ್ ಅವರು ಕೇದಾರನಾಥದಲ್ಲಿ ಚಾರ್ ಧಾಮ್ 'ಯಾತ್ರೆ' ನಿರ್ವಹಣೆ ಕುರಿತು ಸಭೆ ನಡೆಸಿದರು. ಸಭೆಯಲ್ಲಿ ಜನರು ಕೆಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಜನರು ಎತ್ತಿರುವ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಮತ್ತು ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲವು ಜನರು ಇದ್ದಾರೆ ಎಂದು ನೌಟಿಯಾಲ್ ಹೇಳಿದರು. ಅಂತಹ ಜನರು ದೇವಾಲಯದ ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಅವರು ಒತ್ತಾಯಿಸಿದರು.
"ಕೇದಾರನಾಥದಲ್ಲಿ ಯಾತ್ರೆ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಲಾಯಿತು... ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂತಹ ಜನರ ಪ್ರವೇಶವನ್ನು ನಿಷೇಧಿಸಬೇಕು" ಎಂದು ಆಶಾ ನೌಟಿಯಾಲ್ ಭಾನುವಾರ ANI ಗೆ ತಿಳಿಸಿದ್ದಾರೆ.
ಇದಲ್ಲದೆ, ಖಂಡಿತವಾಗಿಯೂ 'ಹಿಂದೂಯೇತರ'ರು ದೇವಾಲಯದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಮತ್ತು ಅಂತಹ ಚಟುವಟಿಕೆಗಳಲ್ಲಿ ಅವರೇ ಭಾಗಿಯಾಗಿದ್ದಾರೆ ಎಂದು ನೌಟಿಯಾಲ್ ಆರೋಪಿಸಿದರು.
"ಅವರು ಖಂಡಿತವಾಗಿಯೂ ಅಲ್ಲಿಗೆ ಬರುವ ಹಿಂದೂಗಳಲ್ಲ ಮತ್ತು ಧಾಮಕ್ಕೆ ಅಪಖ್ಯಾತಿ ತರುವ ಚಟುವಟಿಕೆಗಳಲ್ಲಿ 'ಹಿಂದೂಯೇತರ'ರು ಭಾಗಿಯಾಗಿದ್ದಾರೆ... ಅಂತಹ ಜನರ ಪ್ರವೇಶವನ್ನು ನಿಷೇಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ..." ಎಂದು ಅವರು ಹೇಳಿದರು.