ಸಂಭಲ್: ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಿಯಾ ಮಸೀದಿಯ ಹೊರಗಿನ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಭಾನುವಾರ ಆರಂಭವಾಗಿದೆ ಎಂದು ಮಸೀದಿಯ ವಕೀಲರೊಬ್ಬರು ತಿಳಿಸಿದ್ದಾರೆ.
ಮಸೀದಿಗೆ ಸುಣ್ಣ ಬಳಿಯುವ ಕಾರ್ಯವನ್ನು ಒಂದು ವಾರದೊಳಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಾರ್ಚ್ 12 ರಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶದ ಬಳಿಕ,ಮಾರ್ಚ್ 13 ರಂದು ಪುರಾತತ್ವ ಇಲಾಖೆಯು ಮೌಲ್ಯಮಾಪನ ನಡೆಸಿತ್ತು.
ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಹೊರಗಿನ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಭಾನುವಾರ ಪ್ರಾರಂಭವಾಗಿದೆ ಎಂದು ಸಂಭಲ್ ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿ ಪರ ವಕೀಲ ಶಕೀಲ್ ವಾರ್ಸಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 24ರಂದು ಮೊಘಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವೇಳೆ ಗಲಭೆ ಭುಗಿಲೆದ್ದು, ಸಂಭಲ್ ಉದ್ವಿಗ್ನಗೊಂಡಿತ್ತು. ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು.