ನವದೆಹಲಿ: ಸೇನಾ ಪಡೆಗೆ ಸೇರಿದ ವಿಮಾನವೊಂದನ್ನು (ಆರ್‌ಪಿಎ) ಚೀನಾ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯನ್ನು ಭಾರತೀಯ ಸೇನೆ ತಳ್ಳಿಹಾಕಿದೆ.
ಇಂತಹ ಸುಳ್ಳು ಸುದ್ದಿಗಳನ್ನು ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಸಾರ ಮಾಡಬಾರದು.
ಅಲ್ಲದೆ, ಸೇನೆಯು ತನ್ನ ಎಲ್ಲಾ ಆಸ್ತಿಗಳ ಭದ್ರತೆ ಮತ್ತು ಕಾರ್ಯಾಚರಣೆಯ ಸಮಗ್ರತೆಯನ್ನು ಕಾಯ್ದುಕೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ದೇಶದ ಪೂರ್ವದ ಗಡಿಯಲ್ಲಿ ತಾಲೀಮು ಹಾರಾಟ ನಡೆಸುವಾಗ ರಿಮೋಟ್ ನಿಯಂತ್ರಿತ ವಿಮಾನವೊಂದು ಚೀನಾದ ವಾಯು ಗಡಿಯನ್ನು ಪ್ರವೇಶಿಸಿತ್ತು. ಆಗ ಆ ವಿಮಾನವನ್ನು ಚೀನಾ ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿವಾಗಿತ್ತು. ಇದನ್ನು ಅಲ್ಲಗಳೆದಿರುವ ಭಾರತೀಯ ಸೇನೆ 'ಇದು ಸಂಪೂರ್ಣ ಆಧಾರರಹಿತ ಸುದ್ದಿ. ಅಂತಹ ಯಾವುದೇ ಘಟನೆ ನಡೆದಿಲ್ಲ' ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.