ಸಂಭಲ್ : ಜಮಾತ್ ಮಸೀದಿ ನಿರ್ವಹಣೆ ಸಮಿತಿಯ ಅಧ್ಯಕ್ಷ ಜಾಫರ್ ಅಲಿ ಅವರ ಬಂಧನ ವಿರೋಧಿಸಿ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಕೆಲವು ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ನವೆಂಬರ್ 24ರಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ಹಿರಿಯ ವಕೀಲ ಜಾಫರ್ ಅಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮುಂದೆ ಅಲಿ ಅವರು ಹಾಜರಾಗುವುದನ್ನು ತಡೆಯುವ ಯತ್ನದ ಭಾಗವಾಗಿ ಅವರನ್ನು ಬಂಧಿಸಲಾಗಿದೆ ಎಂದು ಪ್ರತಿಭಟನಾನಿರತ ವಕೀಲರು ಆರೋಪಿಸಿದ್ದಾರೆ.
ಕಳೆದ ವರ್ಷ ನಡೆದ ಹಿಂಸಾಚಾರದ ತನಿಖೆಗಾಗಿ ರಾಜ್ಯ ಸರ್ಕಾರವು ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚನೆ ಮಾಡಿದೆ.