ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯು ಗೋವಿಂದ ಪೈ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಖ್ಯಾತ ಅನುವಾದಕ ಮತ್ತು ಬರಹಗಾರ ಕೆ.ವಿ.ಕುಮಾರನ್ ಮಾಸ್ತರ್ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುಮಾರನ್ ಮಾಸ್ತರ್ ಅವರಿಗೆ ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇತ್ತೀಚೆಗೆ ನೀಡಿ ಗೌರವಿಸಲಾಗಿತ್ತು.
23ರಂದು ಬೆಳಗ್ಗೆ 10 ಕ್ಕೆ ಗಿಳಿವಿಂಡುವಿನಲ್ಲಿ ನಡೆಯುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ 5,000 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಎಂದು ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್ ತಿಳಿಸಿದ್ದಾರೆ.
ಸಮಾರಂಭವನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಸಮಿತಿ ಕಾರ್ಯದರ್ಶಿ ಉಮೇಶ್ ಎಂ. ಸಾಲಿಯಾನ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಭಾಗವಹಿಸುವರು.