ಬದಿಯಡ್ಕ:ಜಗತ್ತಿನ ಜೀವಜಾಲಗಳಲ್ಲಿ ಎಲ್ಲವೂ ಸಮಾನವಾಗಿದ್ದರೂ ಧರ್ಮಾಧಿಷ್ಟಿತವಾದ ಜೀವನ ನಡೆಸುವ ಒಂದಂಶದ ಹೆಚ್ಚುಗಾರಿಕೆಯಿಂದ ಮನುಷ್ಯ ಇತರವುಗಳಿಗಿಂತ ಶ್ರೇಷ್ಠನಾಗಿ ಗುರುತಿಸಲ್ಪಡುತ್ತಿದ್ದಾನೆ. ಹಿಂಸೆ, ಅಸಂತುಷ್ಠಿ ಇಲ್ಲದ ಬದುಕಿಗಾಗಿ ಧರ್ಮದ ಚೌಕಟ್ಟು ಮಾನವನನ್ನು ಮಾಧವನನ್ನಾಗುಸುತ್ತದೆ ಎಂದು ಸಂಪುಟ ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಪಾದಂಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಸಂಜೆ ಶ್ರೀಕ್ಷೇತ್ರದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆದ ಯುವ ಸಂಗಮದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಕಾರ್ಮಾರು ಶ್ರೀಮಹಾವಿಷ್ಣು ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ಅಧ್ಯಕ್ಷತೆ ವಹಿಸಿದ್ದ ಧರ್ಮಸಭೆಯನ್ನು ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯ ಟ್ರಸ್ಟ್ ಸದಸ್ಯ ಅಭಿಲಾಷ್ ಪಿ.ವಿ.ಉದ್ಘಾಟಿಸಿ, ಯುವಶಕ್ತಿಗೆ ಬೆಂಬಲವಾಗಿ ಆಧ್ಯಾತ್ಮಿಕತೆ, ಧಾರ್ಮಿಕತೆ ಬಲ ನೀಡುತ್ತದೆ. ಕಾಂತಿಯುತವಾದ ಯುವತ್ವ ಆಧ್ಯಾತ್ಮದ ಬೆಂಬಲದಲ್ಲಿ ಬೆಳಗುತ್ತದೆ ಎಂದರು.
ಸಮಾರಂಭದಲ್ಲಿ ಶ್ರೀಕ್ಷೇತ್ರದ ಭಕ್ತಿ ಪ್ರದಾನ ಗೀತೆಗಳ ಅಳವಡಿಸಿ ರಚಿಸಿರುವ ಗೀತೆಗಳ ವಿಡಿಯೋ ಅವತರಣಿಯನ್ನು ಬಿಡುಗಡೆಗೊಳಿಸಿ, ಧಾರ್ಮಿಕ ಉಪನ್ಯಾಸ ನೀಡಿದ ಖ್ಯಾತ ಯುವ ವಾಗ್ಮಿ ಆದರ್ಶ ಗೋಖಲೆ ಮಾತನಾಡಿ, ಭಕ್ತಿಯ ಶಕ್ತಿ ಅಪೂರ್ವವಾದುದಾಗಿದ್ದು, ಭಗವಂತನ ಸಾಕ್ಷಾತ್ಕಾರ ಭಕ್ತಿಯಿಂದ ಮಾತ್ರ ಸಾಧ್ಯ ಎಂದರು. ನರನೊಡನೆ ಭಕ್ತಿ ಸೇರಿಕೊಂಡಾಗ ನಾರಾಯನನಾಗಬಲ್ಲ. ಯುವ ಸಮಾಜ ಭಕ್ತಿಯ ಶಕ್ತಿಯನ್ನು ಆವಾಹಿಸಿ ಮುಂದುವರಿದರೆ ಜೀವನ ಸಾಫಲ್ಯಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನೇ ಆಸ್ತಿಯಾಗಿಸಬೇಕೇ ವಿನಃ ಲೌಕಿಕ ಸಂಪತ್ತಿನ ಲಾಲಸೆಗೊಳಗಾಗಿ ಪ್ರಯೋಜನವಿಲ್ಲ ಎಂದವರು ಕರೆನೀಡಿದರು. ಮಕ್ಕಳನ್ನು ಟಿವಿ ಚಾನೆಲ್ ಗಳ ಭಿಗ್ ಬಾಸ್ ವೀಕ್ಷಕರನ್ನಾಗಿಸುವ ಬದಲು ಸಮಾಜ, ದೇಶದ ಭಿಕ್ ಬಾಸ್ ಗಳನ್ನಾಗಿಸಿದಾಗ ಒಂದೊಂದು ಮನೆಯೂ ಪ್ರಶಾಂತ ಸ್ವರ್ಗ ಸಮೃದ್ಧ ಆಲಯಗಳಾಗಿ ಮಾರ್ಪಾಡುಗೊಳ್ಳುವುದು ಎಂದರು.
ಬ್ರಹ್ಮಶ್ರೀ ನಾರಾಯಣ ಆಸ್ರ ಉಳಿಯ, ಡ್ರಾಮಾ ಜ್ಯೂನಿಯರ್ ಕಲಾವಿದ ಅನೂಪ್ ರಮಣ ಶರ್ಮಾ ಮುಳ್ಳೇರಿಯನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಶ್ರೀಕ್ಷೇತ್ರದ ಟ್ರಸ್ಟಿ ನವೀನ್ ಚಂದ್ರ ಪಿ.ಕೆ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಗಲ್ಫ್ ಸಮಿತಿ ಸಂಚಾಲಕ ಶಶಿಧರ ಚೇಡಿಕ್ಕಾನ, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಮಾನ್ಯ ಜ್ಞಾನೋದಯ ಶಾಲಾ ಪ್ರಬಂಧಕ ನಿತ್ಯಾನಂದ ಆರ್.ಮಾನ್ಯ, ರಾಜ್ಯ ಬ್ಯಾಡಿಂಟನ್ ತಂಡದ ಕ್ರೀಡಾಳು ಸಿದ್ಧಾರ್ಥ್ ಏಣಿಯರ್ಪು ಉಪಸ್ಥಿತರಿದ್ದರು.
ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಗೋಕುಲ ಶರ್ಮಾ ಕಾರ್ಮಾರು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಎ.ಎಸ್.ವಂದಿಸಿದರು. ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಧರಣಿ ಸರಳಿ ಪ್ರಾರ್ಥನೆಗೈದರು. ಬಳಿಕ ಮುಳ್ಳೇರಿಯದ ಅಮ್ಮ ತಿರುವಾದಿರ ತಂಡದವರಿಂದ ತಿರುವಾದಿರ ನೃತ್ಯ, ಮಾನ್ಯದ ಅನುಷಾ ಟೀಚರ್ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.