ನವದೆಹಲಿ: ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ಲೋಕಸಭೆಯಲ್ಲಿ ಮಾತನಾಡಲು ನಿಗದಿಪಡಿಸಿದ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ವಿಯೆಟ್ನಾಂನಲ್ಲಿದ್ದರು ಎಂದು ಹೇಳಿದ್ದಾರೆ.
'ಟೈಮ್ಸ್ ನೌ ಶೃಂಗಸಭೆ 2025' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿಯು ಸಂವಿಧಾನದ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳು ಅದನ್ನು ರದ್ದುಗೊಳಿಸುತ್ತವೆ. ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ' ಎಂದು ತಿಳಿಸಿದ್ದಾರೆ.
ಸಂಸತ್ತಿನ ಕಾರ್ಯವೈಖರಿಯ ಕುರಿತು ರಾಹುಲ್ ಟೀಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಮಿತ್ ಶಾ, 'ಸದನದಲ್ಲಿ ಮಾತನಾಡಲು ನಿಯಮಗಳಿವೆ, ಅದನ್ನು ಸ್ವಂತ ಇಚ್ಛೆಯಿಂದ ನಡೆಸಲಾಗುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ತಿಳಿದಿಲ್ಲದಿರಬಹುದು. ಬಜೆಟ್ ಮೇಲಿನ ಚರ್ಚೆಯಲ್ಲಿ ರಾಹುಲ್ ಅವರಿಗೆ ಶೇ 42ರಷ್ಟು ಸಮಯವನ್ನು ನೀಡಲಾಗಿತ್ತು' ಎಂದು ಹೇಳಿದ್ದಾರೆ.
'ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗ, ರಾಹುಲ್ ವಿಯೆಟ್ನಾಂನಲ್ಲಿದ್ದರು. ಹಿಂದಿರುಗಿ ಬಂದ ಬಳಿಕ ಅವರು ತಮ್ಮ ಇಚ್ಛೆಯಂತೆ ಮಾತನಾಡಲು ಪ್ರಾರಂಭಿಸಿದರು. ಸಂಸತ್ತು ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ನಡೆಯುತ್ತದೆ, ಕಾಂಗ್ರೆಸ್ ಪಕ್ಷದಂತೆ ಅಲ್ಲ. ರಾಹುಲ್ ಸಂಸತ್ತಿನ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕು' ಎಂದು ತಿಳಿಸಿದ್ದಾರೆ.
ಲೋಕಸಭೆ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನಡೆಸಲಾಗುತ್ತಿದ್ದು, ನನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.