ಲಂಡನ್: 'ಅಮೆರಿಕ ಅಧ್ಯಕ್ಷರೊಂದಿಗಿನ ಸಂಬಂಧ ಮರುಸ್ಥಾಪಿಸಲು ಯಾವುದಾರೊಂದು ಮಾರ್ಗ ಕಂಡುಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ತಿಳಿಸಲಾಗಿದೆ' ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಹೇಳಿದರು.
ಶುಕ್ರವಾರ ಶ್ವೇತಭವನದ ಓವಲ್ ಹೌಸ್‌ನಲ್ಲಿ ನಡೆದ ಉಕ್ರೇನ್ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಝೆಲೆನ್‌ಸ್ಕಿ ನಡುವೆ ಮಾತಿನ ಜಟಾಪಟಿ ನಡೆದಿತ್ತು.
ಈ ವಿಷಯ ಭವಿಷ್ಯದಲ್ಲಿ ಅಮೆರಿಕ ಮತ್ತು ಉಕ್ರೇನ್ ಸಂಬಂಧ ಮುಂದುವರಿಯುವ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಈ ಬಗ್ಗೆ ಸುದ್ದಿವಾಹಿನಿ ಬಿಬಿಸಿಗೆ ಪ್ರತಿಕ್ರಿಯಿಸಿರುವ ರುಟ್ಟೆ, 'ಇಲ್ಲಿಯವರೆಗೆ ಅಧ್ಯಕ್ಷ ಟ್ರಂಪ್ ಅವರು ಉಕ್ರೇನ್‌ಗಾಗಿ ಮಾಡಿರುವ ಸಹಾಯವನ್ನು ಸ್ಮರಿಸಿ ಅವರಿಗೆ ಗೌರವ ನೀಡಬೇಕಾಗಿತ್ತು' ಎಂದರು.
ಟ್ರಂಪ್ ಮತ್ತು ಝೆಲೆನ್‌ಸ್ಕಿ ನಡುವಿನ ಶುಕ್ರವಾರದ ಸಭೆಯನ್ನು ದುರದೃಷ್ಟಕರ ಎಂದು ಕರೆದಿರುವ ಅವರು, 'ಉಕ್ರೇನ್‌ನಲ್ಲಿ ಶಾಂತಿ ಮರುಕಳಿಸಲು ಅಮೆರಿಕ ಸಾಕಷ್ಟು ಕೆಲಸ ಮಾಡಿದೆ' ಎಂದು ಹೇಳಿದರು.
'ಭಾನುವಾರ ಯುರೋಪಿಯನ್ ಒಕ್ಕೂಟದ ನಾಯಕರು ಲಂಡನ್‌ನಲ್ಲಿ ಭೇಟಿಯಾಗಲಿದ್ದು, ಉಕ್ರೇನ್‌ಗೆ ಭದ್ರತಾ ಖಾತರಿಗಳನ್ನು ನೀಡುವ ಮೂಲಕ ಭವಿಷ್ಯದ ಶಾಂತಿ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ' ಎಂದು ತಿಳಿಸಿದರು.