ನವದೆಹಲಿ: ಶಸ್ತ್ರಾಸ್ತ್ರಗಳನ್ನು ಹಿಡಿದು ಹಿಂಸಾಚಾರದಲ್ಲಿ ತೊಡಗುವುದರಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಛತ್ತೀಸಗಢದಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಕುರಿತು ಎಕ್ಸ್/ ಟ್ವಿಟರ್‌ನಲ್ಲಿ ಶಾ, 'ನಕ್ಸಲಿಸಂ ವಿರುದ್ಧ ಮತ್ತೊಂದು ದಾಳಿ' ಎಂದು ಪ್ರತಿಕ್ರಿಯಿಸಿದ್ದಾರೆ.
'ನಮ್ಮ ಭದ್ರತಾ ಪಡೆಗಳು ಸುಕ್ಮಾದಲ್ಲಿ ಕಾರ್ಯಾಚರಣೆ ನಡೆಸಿ, 16 ನಕ್ಸಲರನ್ನು ಹೊಡೆದುರುಳಿಸಿವೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿವೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಮಾರ್ಚ್ 31ರೊಳಗೆ ನಕ್ಸಲಿಸಂ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ ಎಂದಿರುವ ಅವರು, 'ಶಸ್ತ್ರಾಸ್ತ್ರಗಳು ಮತ್ತು ಹಿಂಸಾಚಾರದ ಮೂಲಕ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಶಾಂತಿ ಹಾಗೂ ಅಭಿವೃದ್ಧಿಯಿಂದಷ್ಟೇ ಅದು (ಬದಲಾವಣೆ) ಸಾಧ್ಯ ಎಂಬುದಾಗಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿರುವವರಿಗೆ ಮನವಿ ಮಾಡುತ್ತೇನೆ' ಎಂದಿದ್ದಾರೆ.
ಛತ್ತೀಸಗಢದ ಸುಕ್ಮಾದಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 16 ನಕ್ಸಲರು ಹತ್ಯೆಯಾಗಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.