ನವದೆಹಲಿ: ಸುಮಾರು ಒಂದು ವರ್ಷದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್, ಮತ್ತೊಬ್ಬ ಗಗನಯಾನಿ ಬುಚ್ ಜೊತೆಗೆ ಇಂದು ರಾತ್ರಿ ಭೂಮಿಗೆ ಮರಳಲು ಸಮಯ ನಿಗದಿಯಾಗಿದೆ.
ಸುನೀತಾ ವಿಲಿಯಮ್ಸ್ ಆಗಮನವನ್ನು ವಿಶ್ವದಾದ್ಯಂತದ ಕೋಟ್ಯಂತರ ಜನರು ಎದುರು ನೋಡುತ್ತಿದ್ದಾರೆ.
ಈ ನಡುವೆ, ಭೂಮಿಗೆ ಮರಳುತ್ತಿರುವ ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಭಾರತಕ್ಕೆ ಆಹ್ವಾನಿಸಿದ್ದಾರೆ.
ವಿಲಿಯಮ್ಸ್ ಮತ್ತು ನಾಸಾ ಗಗನಯಾನಿ ಬುಚ್ ವಿಲ್ಮೋರ್ ಅವರ ಬಹುನಿರೀಕ್ಷಿತ ಮರಳುವಿಕೆ ಕೆಲವು ಗಂಟೆಗಳಲ್ಲಿ ನಡೆಯಲಿದೆ,. ಮಾರ್ಚ್ 18ರಂದು ಫ್ಲೋರಿಡಾ ಸಮಯ ಸಂಜೆ 5.57ಕ್ಕೆ (ಮಾರ್ಚ್ 19ರಂದು ಬೆಳಿಗ್ಗೆ 3.27 ಐಎಸ್‌ಟಿ) ಸಮಯವನ್ನು ನಾಸಾ ನಿಗದಿಪಡಿಸಿದೆ.
ಮೋದಿ ತಮ್ಮ ಪತ್ರವನ್ನು ನಾಸಾದ ಮಾಜಿ ಗಗನಯಾನಿ ಮೈಕ್ ಮಾಸ್ಸಿಮಿನೊ ಮೂಲಕ ಕಳುಹಿಸಿದ್ದಾರೆ. ಈ ಪತ್ರವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
'ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ. ಭಾರತೀಯರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ'ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
'ನೀವು ಹಿಂದಿರುಗಿದ ನಂತರ, ನಾವು ನಿಮ್ಮನ್ನು ಭಾರತದಲ್ಲಿ ನೋಡಲು ಎದುರು ನೋಡುತ್ತಿದ್ದೇವೆ. ಭಾರತವು ತನ್ನ ಅತ್ಯಂತ ಶ್ರೇಷ್ಠ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ಗೌರವಿಸಲು ಸಂತೋಷಪಡುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ.
2016ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಸುನೀತಾ ವಿಲಿಯಮ್ಸ್ ಮತ್ತು ಅವರ ತಂದೆ ದೀಪಕ್ ಪಾಂಡ್ಯ ಅವರನ್ನು ಭೇಟಿ ಮಾಡಿದ್ದನ್ನು ಮೋದಿ ನೆನಪಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಸ್ಸಿಮಿನೊ ಅವರನ್ನು ಭೇಟಿಯಾಗಿದ್ದು, ಮಾತುಕತೆ ಸಮಯದಲ್ಲಿ ಸುನೀತಾ ವಿಲಿಯಮ್ಸ್ ಅವರ ಹೆಸರು ಪ್ರಸ್ತಾಪವಾಯಿತು ಎಂದು ಮೋದಿ ಹೇಳಿದ್ದಾರೆ.
'ನಮ್ಮ ಸಂಭಾಷಣೆಯ ಸಮಯದಲ್ಲಿ, ನಿಮ್ಮ ಹೆಸರು ಬಂದಿತು. ನಾವು ನಿಮ್ಮ ಮತ್ತು ನಿಮ್ಮ ಕೆಲಸದ ಬಗ್ಗೆ ಎಷ್ಟು ಹೆಮ್ಮೆಪಡುತ್ತೇವೆ ಎಂದು ಚರ್ಚಿಸಿದೆವು. ಈ ಸಂವಾದದ ನಂತರ, ನಾನು ನಿಮಗೆ ಪತ್ರ ಬರೆಯದೇ ಇರಲು ಸಾಧ್ಯವಾಗಲಿಲ್ಲ'ಎಂದು ಅವರು ಹೇಳಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾದಾಗ ಸುನೀತಾ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
1.4 ಬಿಲಿಯನ್ ಭಾರತೀಯರು ವಿಲಿಯಮ್ಸ್ ಸಾಧನೆಗಳ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತಾರೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ ನಿಮ್ಮ ಸ್ಪೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನು ಪ್ರದರ್ಶಿಸಿವೆ ಎಂದು ಬರೆದಿದ್ದಾರೆ.
ಸುನೀತಾ ವಿಲಿಯಮ್ಸ್ ಅವರ ಪತಿ ಮೈಕೆಲ್ ವಿಲಿಯಮ್ಸ್ ಅವರಿಗೂ ಪ್ರಧಾನಿ ತಮ್ಮ ಆತ್ಮೀಯ ಶುಭಾಶಯಗಳನ್ನು ಕಳುಹಿಸಿದ್ದಾರೆ.