ಪುಣೆ: ನಕಲು ಮತ್ತು ಕೃತಿಸ್ವಾಮ್ಯ(ಕಾಪಿರೈಟ್) ಉಲ್ಲಂಘನೆ ಪ್ರಕರಣದ ಆರೋಪಿಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಪುಣೆ ನ್ಯಾಯಾಲಯದ ನ್ಯಾಯಾಧೀಶರ ನಕಲಿ ಸಹಿಯುಳ್ಳ ಖೋಟಾ ಆದೇಶ ತೋರಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸುಳ್ಳು ದಾಖಲೆ ನೀಡಿ ಜನವರಿಯಲ್ಲಿ ಜಾಮೀನು ಪಡೆದಿರುವ ಹರಿಭಾವ್ ಚೆಮ್ಟೆ ಎಂಬುವವರು ಇದೀಗ ತಲೆಮರೆಸಿಕೊಂಡಿದ್ದಾರೆ.
2022ರಲ್ಲಿ ಪುಣೆಯ ಸಿಟಿಆರ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯು ತನ್ನ ಬಣ್ಣದ ರೇಖಾಚಿತ್ರ(ಪೇಂಟಿಂಗ್) ಮತ್ತು ಡಿಸೈನ್ (ವಿನ್ಯಾಸ) ಅನ್ನು ಚೆನ್ನೈ ಮೂಲದ ಕಂಪನಿ ದುರ್ಬಳಕೆ ಮಾಡಿಕೊಂಡಿದೆ ಎಂದು ವಿಮಾಂತಲ್ ಠಾಣೆಗೆ ದೂರು ನೀಡಿತ್ತು.
ಸಿಟಿಆರ್ ಸಂಸ್ಥೆಯ ಗುಣಮಟ್ಟ ವಿಭಾಗದಲ್ಲಿದ್ದ ಚೆಮ್ಟೆ, ವಿನ್ಯಾಸವನ್ನು ಕಳವು ಮಾಡಿ ಚೆನ್ನೈ ಕಂಪನಿಗೆ ನೀಡಿರುವುದನ್ನು ಪೊಲೀಸರು ಪತ್ತೆಹಚ್ಚಿ, ಎಫ್‌ಐಆರ್ ಹಾಕಿದ್ದರು.
ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಚೆಮ್ಟೆ, ಪುಣೆಯ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಕೈ ಬರವಣಿಗೆಯ ನಕಲು ಆದೇಶ ಪ್ರತಿಯನ್ನು ಸಲ್ಲಿಸಿದ್ದರು. ಜನವರಿ 17ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.
ನಕಲಿ ಆದೇಶ ಪ್ರತಿ ಸಲ್ಲಿಸಿದ್ದ ಬಗ್ಗೆ ಪ್ರಕರಣದ ಮೂಲ ಅರ್ಜಿದಾರರು ಬಾಂಬೆ ಹೈಕೋರ್ಟ್ ಗಮನಕ್ಕೆ ತಂದಿದ್ದರು. ನಿರೀಕ್ಷಣಾ ಜಾಮೀನು ವಜಾ ಮಾಡಿದ್ದ ಹೈಕೋರ್ಟ್, ವಂಚನೆ ಬಗ್ಗೆ ತನಿಖೆಗೆ ಆದೇಶಿಸಿದೆ. ವಂಚಕ ಚೆಮ್ಟೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.