ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗಂಗಾ ನದಿಯನ್ನು ಶುದ್ಧೀಕರಣಗೊಳಿಸುವ ಹೆಸರಿನಲ್ಲಿ ಮಾತೆ ಗಂಗೆಯನ್ನು ವಂಚಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಪ್ರಧಾನಿ ಮೋದಿ ಅವರು ಗಂಗಾ ಮಾತೆ ಎಂದು ಕರೆಯುತ್ತಾರೆ.
ಆದರೆ, ಸತ್ಯವೆಂದರೆ ಅವರು ಗಂಗಾ ನದಿಯನ್ನು ಸ್ವಚ್ಚಗೊಳಿಸುವ ಭರವಸೆಯನ್ನು ಮರೆತಿದ್ದಾರೆ' ಎಂದು ಹೇಳಿದ್ದಾರೆ.
'ಸುಮಾರು 11 ವರ್ಷಗಳ ಹಿಂದೆ 2014ರಲ್ಲಿ ಗಂಗಾ ನದಿ ಶುದ್ಧೀಕರಣಕ್ಕಾಗಿ 'ನಮಾಮಿ ಗಂಗೆ' ಬೃಹತ್ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದರಡಿಯಲ್ಲಿ 2026ರ ಮಾರ್ಚ್‌ವರೆಗೆ ₹42,500 ಕೋಟಿ ಹಣವನ್ನು ನಿಗದಿಗೊಳಿಸಲಾಗಿದೆ. ಆದರೆ, ಸಂಸತ್ತಿನಲ್ಲಿ ಈ ಕುರಿತ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಕಳೆದ ವರ್ಷ (2024) ಡಿಸೆಂಬರ್‌ವರೆಗೆ ಕೇವಲ ₹19,271 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಂದರೆ, ಪ್ರಧಾನಿ ಮೋದಿ ಅವರ ಸರ್ಕಾರ ನಮಾಮಿ ಗಂಗೆ ಯೋಜನೆಯ ಶೇ 55ರಷ್ಟು ಹಣವನ್ನು ಖರ್ಚು ಮಾಡಿಲ್ಲ. ಮಾತೆ ಗಂಗೆಯ ಬಗ್ಗೆ ಇಷ್ಟೊಂದು ಅಸಡ್ಡೆ ಏಕೆ' ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಗಂಗಾ ನದಿ ಶುದ್ಧೀಕರಣದ ಕುರಿತು ಪ್ರಧಾನಿ ಮೋದಿ ಅವರುನ್ನು ಟೀಕಿಸಿರುವ ಖರ್ಗೆ, '2015ರಲ್ಲಿ ಪ್ರಧಾನಿ ಮೋದಿ ಅವರು ಅನಿವಾಸಿ ಭಾರತೀಯ ಸ್ನೇಹಿತರನ್ನು 'ಸ್ವಚ್ಚ ಗಂಗಾ ನಿಧಿ'ಗೆ ಕೊಡುಗೆ ನೀಡುವಂತೆ ಕೇಳಿಕೊಂಡಿದ್ದರು. 2024ರ ಮಾರ್ಚ್‌ವರೆಗೆ ಈ ನಿಧಿಗೆ ₹876 ಕೋಟಿ ದೇಣಿಗೆ ಬಂದಿದೆ. ಆದರೆ, ಅದರಲ್ಲಿ ಶೇ 56.7ರಷ್ಟು ಹಣ ಇನ್ನೂ ಬಳಕೆಯಾಗಿಲ್ಲ. ಈ ನಿಧಿಯ ಸುಮಾರು ಶೇ 53ರಷ್ಟು ಹಣವನ್ನು ಸರ್ಕಾರಿ ಸಂಸ್ಥೆಗಳು ದೇಣಿಗೆ ನೀಡಿವೆ' ಎಂದು ಖರ್ಗೆ 'ಎಕ್ಸ್' ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ಉತ್ತರಾಖಂಡದ ಮುಖ್ವಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.