ಟೊರೊಂಟೊ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅವರ ಎದುರಾಳಿ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರ ಪ್ರತಿಪಾದಿಸಿದ್ದಾರೆ.
ಚುನಾವಣಾ ಪ್ರಚಾರ ಆರಂಭಿಸಿರುವ ಇಬ್ಬರೂ ನಾಯಕರು ಈ ಕುರಿತು ಪ್ರಸ್ತಾಪ ಮಾಡಿದ್ದಾರೆ.
ಸುಂಕ ಸೇರಿದಂತೆ ವಿವಿಧ ರೀತಿಯ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 28ರಂದು ಮತದಾನ ನಡೆಯಲಿದೆ ಎಂದು ಹೇಳಿದ ಕಾರ್ನಿ ಅವರು, ಐದು ವಾರಗಳ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
'ಟ್ರಂಪ್ ಅವರ ನ್ಯಾಯಸಮ್ಮತವಲ್ಲದ ವ್ಯಾಪಾರದ ಕ್ರಮಗಳಿಂದ ಕೆನಡಾ ಗಮನಾರ್ಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲದೆ ಅವರು ದೇಶದ ಸಾರ್ವಭೌಮತ್ವಕ್ಕೂ ಬೆದರಿಕೆಯೊಡ್ಡುತ್ತಿದ್ದಾರೆ' ಎಂದು ಕಾರ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಟ್ರಂಪ್ ಅವರು ಕೆನಡಾವನ್ನು ನೈಜ ದೇಶ ಎಂದೇ ಪರಿಗಣಿಸಿಲ್ಲ. ಅವರು ನಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ನಮ್ಮ ದೇಶವನ್ನು ತಮ್ಮದಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಕಾರ್ನಿಯ ಅವರ ಪ್ರಮುಖ ಪ್ರತಿಸ್ಪರ್ಧಿ ಆಗಿರುವ ಕನ್ಸರ್ವೇಟಿವ್‌ಗಳ ನಾಯಕ ಪಿಯರೆ ಪೊಯ್ಲಿವ್ರ ಅವರು, 'ನಾನು ಟ್ರಂಪ್‌ಗೆ ವಿರುದ್ಧವಾಗಿ ನಿಲ್ಲುತ್ತೇನೆ. ಅಮೆರಿಕದ ಅಧ್ಯಕ್ಷರು ಕೆನಡಾದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗುರುತಿಸಬೇಕು ಮತ್ತು ನಮ್ಮ ದೇಶಕ್ಕೆ ಸುಂಕ ವಿಧಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದು ತಿಳಿಸಿದ್ದಾರೆ.
ಹೌಸ್ ಆಫ್ ಕಾಮನ್ಸ್‌ನ 343 ಸ್ಥಾನಗಳಿಗೆ ಏಪ್ರಿಲ್ 28ರಂದು ಚುನಾವಣೆ ನಡೆಯಲಿದೆ. ಲಿಬರಲ್ಸ್ ಮತ್ತು ಕನ್ಸರ್ವೇಟಿವ್ ಪಕ್ಷಗಳೇ ಅಲ್ಲದೆ ಇತರ ಪಕ್ಷಗಳೂ ಸ್ಪರ್ಧಿಸಲಿವೆ. ಸಂಸತ್ತಿನಲ್ಲಿ ಏಕಾಂಗಿಯಾಗಿ ಅಥವಾ ಇತರ ಪಕ್ಷದ ಬೆಂಬಲದೊಂದಿಗೆ ಬಹುಮತ ಪಡೆಯುವ ಪಕ್ಷವು ಮುಂದಿನ ಸರ್ಕಾರ ರಚಿಸುತ್ತದೆ ಮತ್ತು ಅದರ ನಾಯಕ ಪ್ರಧಾನಿಯಾಗುತ್ತಾರೆ.