ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಸೋಮವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಉಯೋಕ್ ಅರಣ್ಯದ ಸುತ್ತಮುತ್ತಲ ಪ್ರದೇಶದಿಂದ ಒಂದು 5.56 ಎಂಎಂ ಇನ್ಸಾಸ್ ರೈಫಲ್, ಎರಡು 9 ಎಂಎಂ ಕಾರ್ಬೈನ್ ಮೆಷಿನ್ ಗನ್‌ಗಳು, ಒಂದು 303 ಮಾರ್ಪಡಿಸಿದ ಸ್ನೈಪರ್, ಒಂದು ಎಸ್‌ಬಿಬಿಎಲ್ ಗನ್, ಒಂದು ಪಿಸ್ತೂಲ್, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲೂಟಿ ಮಾಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಗುಪ್ತಚರ ಆಧಾರಿತ ಕೂಂಬಿಂಗ್ ಹಾಗೂ ಶೋಧ ಕಾರ್ಯಾಚರಣೆಗಳನ್ನು ರಾಜ್ಯದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಭದ್ರತಾ ಪಡೆಗಳು ರಾಷ್ಟ್ರೀಯ ಹೆದ್ದಾರಿ 2ರ (ಇಂಫಾಲ್ ನಿಂದ ದಿಮಾಪುರ್) ಉದ್ದಕ್ಕೂ ಅಗತ್ಯ ವಸ್ತುಗಳನ್ನು ಸಾಗಿಸುವ 475 ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಂಡಿವೆ.
ಶಂಕಾಸ್ಪದ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಾಹನಗಳ ಮುಕ್ತ ಮತ್ತು ಸುರಕ್ಷಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಬೆಂಗಾವಲು ಒದಗಿಸಲಾಗಿದೆ.