ನವದೆಹಲಿ: ತಾಜ್ ಟ್ರಪೀಜಿಯಂ ವಲಯ (ಟಿಟಿಜೆಡ್) ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿ ಮರಗಳ ಗಣತಿ ನಡೆಸಲು ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯನ್ನು ನೇಮಕ ಮಾಡಬೇಕು ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಎನ್.ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು, ಈಗ ಇರುವ ಮರಗಳ ಬಗ್ಗೆ ಮಾಹಿತಿ ಇಲ್ಲದಿರುವಾಗ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲು ಆಗುವುದಿಲ್ಲ ಎಂದು ಹೇಳಿದೆ.
ಟಿಟಿಜೆಡ್ ವಲಯವು ಅಂದಾಜು 10,400 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯದಲ್ಲಿ ಹರಡಿಕೊಂಡಿದೆ.
ಉತ್ತರ ಪ್ರದೇಶ ಮರಗಳ ರಕ್ಷಣಾ ಕಾಯ್ದೆ - 1976ರ ಉದ್ದೇಶವು ಮರಗಳನ್ನು ರಕ್ಷಿಸುವುದೇ ವಿನಾ ಅವುಗಳನ್ನು ಕತ್ತರಿಸುವುದಲ್ಲ. ಮರಗಳ ಗಣತಿ ನಡೆಯದೆ ಇದ್ದರೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದಕ್ಕೆ ಆಗುವುದಿಲ್ಲ ಎಂದು ಪೀಠವು ಹೇಳಿದೆ.
ಟಿಟಿಜೆಡ್ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವುದನ್ನು ತಡೆಯಲು ವ್ಯವಸ್ಥೆ ರೂಪಿಸಬೇಕು, ಮರಗಳ ಗಣತಿ ಆಗಬೇಕು ಎಂದು ಈ ಹಿಂದೆಯೂ ಕೋರ್ಟ್ ಹೇಳಿತ್ತು.