ನವದೆಹಲಿ: 'ಅಲ್ಪಸಂಖ್ಯಾತರ ಮೇಲಿನ ವ್ಯವಸ್ಥಿತ ಕಿರುಕುಳವನ್ನು ಬಾಂಗ್ಲಾದೇಶ ಸರ್ಕಾರವು ಒಪ್ಪಿಕೊಳ್ಳುತ್ತಿಲ್ಲ. ಶೇಖ್ ಹಸೀನಾ ಸರ್ಕಾರದ ನಂತರದಲ್ಲಿ ಅಲ್ಲಿರುವ ಮಧ್ಯಂತರ ಸರ್ಕಾರವು ಹಿಂದೂಗಳ ಮೇಲಿನ ದಾಳಿಯನ್ನು ಮರೆಮಾಚುವ ಪ್ರಯತ್ನ ನಡೆಸಿದೆ' ಎಂದು ವಿದೇಶಾಂಗ ಸಚಿವಾಲಯವು ಸಂಸದೀಯ ಸಮಿತಿಗೆ ಬುಧವಾರ ತಿಳಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಸಚಿವಾಲಯ ಮಾಹಿತಿ ನೀಡಿದ್ದು, 'ನೆರೆಯ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆಯ ಪರಿಣಾಮ ಸಾರ್ವಜನಿಕ ಪ್ರದೇಶಗಳಲ್ಲಿ ಧರ್ಮದ ವೈಭವೀಕರಣ ಮೇರೆ ಮೀರಿದೆ. ಇಸ್ಲಾಮಿಕ್ ಧಾರ್ಮಿಕ ಹಾಗೂ ರಾಜಕೀಯ ಸ್ಥಾಪಿಸುವ ತೀವ್ರವಾದಿಗಳ ಗುಂಪಿನ ಅಟ್ಟಹಾಸ ಮೇರೆ ಮೀರಿದೆ' ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಮಿತಿಗೆ ಮಾಹಿತಿ ನೀಡಿ, ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದ ಭವಿಷ್ಯದ ಕುರಿತು ಸಮಿತಿಗೆ ಮಾಹಿತಿ ನೀಡಿದರು. ಜತೆಗೆ ಜಗತ್ತಿನ ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ಕುರಿತೂ ಮಾಹಿತಿ ನೀಡಿದ್ದಾರೆ.
ಸಭೆಯ ನಂತರ ಮಾಹಿತಿ ನೀಡಿದ ಶಶಿ ತರೂರ್, 'ಇಂದು ಸಮಗ್ರವಾದ ಚರ್ಚೆ ನಡೆಯಿತು. ಮಿಸ್ರಿ ಅವರು ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದ ಕುರಿತು ಸಮಿತಿಗೆ ಮಾಹಿತಿ ನೀಡಿದರು. ಬಾಂಗ್ಲಾದೇಶದಲ್ಲಿರುವ ಭಾರತೀಯರ ಸ್ಥಿತಿ ಕುರಿತ ವರದಿಯನ್ನು ಸಮಿತಿ ಅಂಗೀಕರಿಸಿದೆ' ಎಂದಿದ್ದಾರೆ.
'ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಲ್ಲೆಯ ಸುದ್ದಿಗಳು ಮಾಧ್ಯಮಗಳ ವೈಭವೀಕರಣ ಎಂದು ಅಲ್ಲಿನ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಮತ್ತು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ಅವಾಮಿ ಲೀಗ್‌ನ ಕಾರ್ಯಕರ್ತರ ಹತ್ಯೆಯು ರಾಜಕೀಯ ಪ್ರೇರಿತವೇ ಹೊರತು, ಧಾರ್ಮ ಕಾರಣವಲ್ಲ' ಎಂದಿರುವುದನ್ನು ಸಚಿವಾಲಯವು ಸಮಿತಿಗೆ ತಿಳಿಸಿದೆ.
'ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಕೂಡಲೇ ಹತ್ತಿಕ್ಕುವಂತೆ ಹಾಗೂ ನೊಂದವರಿಗೆ ನ್ಯಾಯ ದೊರಕಿಸುವಂತೆ ಹಲವು ಬಾರಿ ನೆರೆಯ ರಾಷ್ಟ್ರದಲ್ಲಿರುವ ಮಧ್ಯಂತರ ಸರ್ಕಾರಕ್ಕೆ ಭಾರತ ಸರ್ಕಾರ ಮನವಿ ಮಾಡಿಕೊಂಡಿದೆ. ಕೆಲವರನ್ನು ಬಂಧಿಸಲಾಗಿದೆ. ಆದರೆ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮವನ್ನು ಅಲ್ಲಿನ ಸರ್ಕಾರ ಕೈಗೊಂಡಿಲ್ಲ. ಅಲ್ಪಸಂಖ್ಯಾತರು ಮತ್ತು ಅವರ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿ ಕುರಿತು ಈಗಲೂ ವರದಿಯಾಗುತ್ತಿವೆ' ಎಂದು ವರದಿಯಲ್ಲಿ ಹೇಳಲಾಗಿದೆ.