ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಿಸಲು 'ರಾಷ್ಟ್ರೀಯ ಸ್ಮೃತಿ ಸ್ಥಳ'ದಲ್ಲಿ ಗುರುತಿಸಲಾದ ಜಾಗಕ್ಕೆ ಅವರ ಕುಟುಂಬದ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರವು ಗುರುತಿಸಿರುವ ಜಾಗದಲ್ಲಿ ಸ್ಮಾರಕ ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ಸೂಚಿಸಿ ಸಿಂಗ್ ಅವರ ಕುಟುಂಬವು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿಯ ಮೂವರು ಪುತ್ರಿಯರು ಮತ್ತು ಅವರ ಪತಿಯಂದಿರುವ ಸ್ಮಾರಕ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳಕ್ಕೆ ಈ ಹಿಂದೆ ಭೇಟಿ ನೀಡಿದ್ದರು. ಸ್ಮಾರಕಕ್ಕೆ 'ರಾಷ್ಟ್ರೀಯ ಸ್ಮೃತಿ ಸ್ಥಳ'ದಲ್ಲಿ 900 ಚ.ಮೀ. ಜಾಗ ನಿಗದಿಪಡಿಸಲಾಗಿದೆ. ಹಲವು ಮಾಜಿ ಪ್ರಧಾನಿಗಳು ಮತ್ತು ರಾಷ್ಟ್ರಪತಿಗಳ ಸ್ಮಾರಕಗಳು 'ರಾಷ್ಟ್ರೀಯ ಸ್ಮೃತಿ ಸ್ಥಳ'ದಲ್ಲಿದೆ. ಈ ಉದ್ದೇಶಿತ ಸ್ಥಳವು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಮಾರಕದ ಪಕ್ಕದಲ್ಲೇ ಇದೆ.
ಸಿಂಗ್ ಅವರ ಸ್ಮರಣಾರ್ಥ ಟ್ರಸ್ಟ್‌ವೊಂದನ್ನು ಸ್ಥಾಪಿಸಿದ ಬಳಿಕ ಸರ್ಕಾರವು ಆ ಟ್ರಸ್ಟ್ ಹೆಸರಿಗೆ ಭೂಮಿಯನ್ನು ಹಸ್ತಾಂತರಿಸಲಿದೆ. ಟ್ರಸ್ಟ್‌ನ ಸದಸ್ಯರ ಹೆಸರನ್ನು ಸಿಂಗ್ ಅವರ ಕುಟುಂಬವು ಶೀಘ್ರದಲ್ಲೇ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಟ್ರಸ್ಟ್ ರಚನೆಯಾದ ನಂತರ, ಸ್ಮಾರಕದ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹25 ಲಕ್ಷ ಅನುದಾನವನ್ನು ನೀಡಲಿದೆ ಎಂದು ಹೇಳಿವೆ.