ನವದೆಹಲಿ: ಜೈಲಿನಲ್ಲಿ ಇರುವ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ವಿಚಾರಣೆಯನ್ನು ಜಮ್ಮು ಮತ್ತು ಕಾಶ್ಮೀರದಿಂದ ದೆಹಲಿಗೆ ವರ್ಗಾವಣೆ ಮಾಡಬೇಕು ಎಂಬ ಕೋರಿಕೆಯೊಂದಿಗೆ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 4ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಮಲಿಕ್ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಲಭ್ಯರಿಲ್ಲದ ಕಾರಣ ಪೀಠವು ವಿಚಾರಣೆ ಮುಂದೂಡಿತು.
ವಿಚಾರಣೆಯನ್ನು ರಂಜಾನ್ ನಂತರದ ದಿನಕ್ಕೆ ನಿಗದಿ ಮಾಡಬೇಕು ಎಂದು ಮಲಿಕ್ ಕೋರಿದ್ದನ್ನು ಪೀಠವು ಒಪ್ಪಿತು. ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯಾ ಸಯೀದ್ ಅವರ ಅಪಹರಣ ಪ್ರಕರಣ ಮತ್ತು 1990ರ ಶ್ರೀನಗರ ಶೂಟೌಟ್ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಸಿಬಿಐ ಕೋರಿದೆ.