ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ದೂರದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುದಾಣ ಪತ್ತೆಯಾಗಿದ್ದು, ಒಂದು ಪಿಸ್ತೂಲ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ಭದೇರ್ವಾದ ಭಲ್ರಾ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಸೇನೆಯ ವಿಶೇಷ ಕಾರ್ಯಾಚರಣೆ ಗುಂಪು(ಎಸ್‌ಒಜಿ) ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಅಡಗುದಾಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮಾನಾಸ್ಪದ ಚಲನವಲನಗಳ ವರದಿಗಳ ನಂತರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಈ ಸಮಯದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಪಕ್ಕದ ಕಿಶ್ತ್‌ವಾರ್ ಜಿಲ್ಲೆಯ ಗುರಿನಾಲ್, ಥಾಥ್ರಿ ಮತ್ತು ಚತ್ರೂ ಅರಣ್ಯದಲ್ಲಿ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರು ಇರುವ ಬಗ್ಗೆ ಕೆಲವು ಗ್ರಾಮಸ್ಥರು ಮಾಹಿತಿ ಹಂಚಿಕೊಂಡ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ.
ಆದರೂ, ಶಂಕಿತ ವ್ಯಕ್ತಿಗಳೊಂದಿಗೆ ಇಲ್ಲಿಯವರೆಗೆ ಯಾವುದೇ ಸಂಪರ್ಕ ಸ್ಥಾಪಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.