ಹೈದರಾಬಾದ್: ಆಂಧ್ರದ ತಿರುಮಲ ತಿರುಪತಿಯ ದೇವಾಲಯಕ್ಕೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲೊಂದಾದ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ಸ್ಯಾಕ್ ವೊಂದನ್ನು ಪರಿಚಯಿಸಲಾಗಿದೆ. ಇಂದಿನಿಂದ ಅನ್ನ ಪ್ರಸಾದದ ಮೆನುವಿನಲ್ಲಿ ಮಸಾಲೆ ವಡೆಯನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಪರಿಚಯಿಸಿದೆ.
ತಿರುಮಲದಲ್ಲಿರುವ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ TTD ಅಧ್ಯಕ್ಷ ಬಿ.ಆರ್.ನಾಯ್ಡು ಮತ್ತಿತರ ಅಧಿಕಾರಿಗಳು ಇಂದು ಮಸಾಲ ವಡೆ ಸೇವೆಗೆ ಚಾಲನೆ ನೀಡಿದ್ದಾರೆ. ಭಕ್ತರಿಗೆ ರುಚಿಕರವಾದ 'ಮಸಾಲೆ ವಡೆ' ನೀಡುವ ಕಾರ್ಯಕ್ರಮವನ್ನು ಬಿಆರ್ ನಾಯ್ಡು ಇಂದು ಬೆಳಗ್ಗೆ ಪ್ರಾರಂಭಿಸಿದರು ಎಂದು ದೇವಸ್ಥಾನದ ಅಧಿಕೃತ ಪ್ರಕಟಣೆ ತಿಳಿಸಿದೆ.
ಅನ್ನ ಪ್ರಸಾದ ಮೆನುವಿನಲ್ಲಿ ಹೆಚ್ಚುವರಿ ಐಟಂ ಅನ್ನು ಸೇರಿಸುವ ಸಂಬಂಧ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲಿಸಲಾದ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿದ್ದು, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತಿತರ ಪದಾರ್ಥಗಳಿಂದ ತಯಾರಿಸಿದ ಮಸಾಲೆ ವಡೆ ಅನ್ನ ಪ್ರಸಾದ ಮೆನುವನ್ನು ಶ್ರೀಮಂತಗೊಳಿಸಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಅನ್ನ ಪ್ರಸಾದ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ 35,000 ಮಸಾಲೆ ವಡೆಗಳನ್ನು ಭಕ್ತರಿಗೆ ನೀಡಲಾಗುವುದು. ಭವಿಷ್ಯದಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಮತ್ತು ಭಕ್ತರಿಗೆ ರುಚಿಕರವಾದ ಆಹಾರವನ್ನು ನೀಡಲಾಗುವುದು ಎಂದು ಟಿಟಿಡಿ ಅಧ್ಯಕ್ಷರು ಹೇಳಿದ್ದಾರೆ.
ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರು ದಿನಕ್ಕೆ 2,000 ಯಾತ್ರಿಕರಿಗೆ ಉಚಿತ ಆಹಾರ ನೀಡಲು ವೆಂಕಟೇಶ್ವರ ನಿತ್ಯ ಅನ್ನದಾನ ದತ್ತಿ ಯೋಜನೆಯನ್ನು 1985 ರಲ್ಲಿ ಪ್ರಾರಂಭಿಸಿದರು. ನಂತರ ಇದು ಸ್ವತಂತ್ರ ಟ್ರಸ್ಟ್ ಆಗಿದ್ದು, 1994 ರಲ್ಲಿ ಶ್ರೀ ವೆಂಕಟೇಶ್ವರ ನಿತ್ಯ ಅನ್ನದಾನ ಟ್ರಸ್ಟ್ ಮತ್ತು 2014 ರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಆಗಿ ರೂಪಾಂತರಗೊಂಡಿತು. ಹೊಸ ವರ್ಷ, ವೈಕುಂಠ ಏಕಾದಶಿ, ರಥಸಪ್ತಮಿ ಮತ್ತು ಗರುಡ ಸೇವೆಯಂತಹ ಶುಭ ಸಂದರ್ಭಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ.