ಬದಿಯಡ್ಕ:ಹೊಸ ತಲೆಮಾರು ಧಾರ್ಮಿಕ ಪ್ರಜ್ಞೆಯತ್ತ ಹೆಚ್ಚು ಆಸಕ್ತರಾಗಬೇಕು. ವ್ಯಕ್ತಿ ಶಕ್ತಿಯಾಗಿ ಬೆಳೆಯುವಲ್ಲಿ ಕಾರ್ಯೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಜ್ಞಾನ ಪರಂಪರೆಯೊಂದೇ ಶಾಶ್ವತ ಎಂದು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವರ್ವಚನ ನೀಡಿ ಮಾತನಾಡಿದರು.
ಸರ್ವವ್ಯಾಪಕನಾದ ದೇವರು ಎಲ್ಲರನ್ನೂ ಸಂರಕ್ಷಣೆ ಮಾಡುವನೆಂಬ ಭಕ್ತಿ, ಚಿಂತನೆಗಳು ನಮ್ಮ ಸಂಸ್ಕøತಿಯ ತಳಹದಿಯಾಗಿದೆ. ಭಕ್ತಿಯ ಪ್ರಾರ್ಥನೆಗೆ ಭಗವಂತನ ಅನುಭೂತಿ ಲಭಿಸುತ್ತದೆ. ಮನುಷ್ಯ ಶ್ರೇಷ್ಠನಾಗುವುದು ವಿದ್ಯೆಯಿಂದ. ಇದರಿಂದ ದೋಷ,ಲೋಪಗಳು ನಿವಾರಣೆಯಾಗಿ ನಾರಾಯಣತ್ವ ಪ್ರಾಪ್ತಿಯಾಗುತ್ತದೆ ಎಂದವರು ತಿಳಿಸಿದರು.
ದೇವಾಲಯದ ಅಭಿವೃದ್ಧಿಯ ಜೊತೆಗೆ ಅದರ ಆತ್ಯಂತಿಕ ಲಕ್ಷ್ಯಗಳಲ್ಲಿ ಒಂದಾದ ಪ್ರಕೃತಿ ಸಂರಕ್ಷಣೆ, ಜ್ಞಾನ ಶಿಕ್ಷಣ ಮೊದಲಾದವುಗಳು ಇಲ್ಲಿಂದ ಸಮಾಜಕ್ಕೆ ಲಭಿಸಬೇಕು. ಇಂದಿನ ಯುವಜನರ ಖಿನ್ನತೆ, ಒತ್ತಡದ ಜೀವನಕ್ಕೆ ದೇವಾಲಯ ಕೇಂದ್ರವಾಗಿಸಿ ಉತ್ತರ ಕಂಡುಕೊಳ್ಳುವ ಯತ್ನಗಳಾಗಬೇಕು. ಬುದ್ಧಿ, ಮನಸ್ಸುಗಳಿಗೆ ಬೆಂಬಲ ನೀಡುವ, ಆರ್ತರಿಗೆ ನೆರವಾಗುವ ಮೂಲಕ ಬದುಕನ್ನು ಸಾಫಲ್ಯಗೊಳಿಸಬೇಕು. ಉಪಾಸನೆಯ ಜೊತೆಗೆ ತ್ಯಾಗಮಯಿ ಜೀವಗಳ ಬಗ್ಗೆ ಗೌರವವಿರಲಿ ಎಂದು ಶ್ರೀಗಳು ತಿಳಿಸಿದರು.
ಉದ್ಯಮಿ ಸುಬ್ರಹ್ಮಣ್ಯ ಭಟ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಯುವ ವಾಗ್ಮಿ ಮಂಜುನಾಥ ಉಡುಪ ಅವರು ಉಪಸ್ಥಿತರಿದ್ದು ಧಾರ್ಮಿಕ ಉಪನ್ಯಾಸ ನೀಡಿ, ಆರಾಧನಾಲಯಗಳನ್ನು ಕೇಂದ್ರೀಕರಿಸಿ ನಿರಂತರವಾಗಿ ನಡೆಸುವ ಆಮ್ನಾಯ ಜಪ, ಭಗವಂತನ ನಾಮಸ್ಮರಣೆ ವ್ಯಕ್ತಿ-ಸಮಾಜಗಳನ್ನು ಧನಾತ್ಮಕವಾಗಿ ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸೇವಾ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು, ಭೂತದಯೆಗಳು ನಮ್ಮ ಬದುಕಿನ ಲಕ್ಷ್ಯವಾಗಿರಬೇಕು. ದೇವಾಲಯಗಳ ಆವರಣ ಸಸ್ಯಕಾಶಿಯಿಂದ ನಳನಳಿಸಿದಾಗ ಸ್ವರ್ಗ ಸದೃಶ ಪರಿಸರ ಭಜಕರ ಮೇಲೆ ಧನಾತ್ಮಕ ಪರಿಣಾಮಗಳೊಂದಿಗೆ ಪ್ರಕೃತಿಯೊಂದಿಗಿನ ಅನುಸಂಧಾಕ್ಕೆ ವೇದಿಕೆಯಾಗುತ್ತದೆ. ಜೊತೆಗೆ ಕೆರೆಕಟ್ಟೆಗಳ ಸಂರಕ್ಷಣೆ ನಮ್ಮ ಭವಿಷ್ಯಕ್ಕೆ ಹೊಸ ನಾಂದಿಯೊಂದಿಗೆ ಬದುಕಿಗೊಂದು ಸಾಫಲ್ಯತೆ ಕಂಡುಕೊಳ್ಳಬೇಕಿದೆ ಎಂದರು.
ಶ್ರೀಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಖ್ಯಾತ ರೇಖಿ, ಸಮ್ಮೋಹಿನಿ ತಜ್ಞ ಶಶಿ ಕುಂಬಳೆ ಉಪಸ್ಥಿತರಿದ್ದು ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ರಾಮ ಕಾರ್ಮಾರು ವಂದಿಸಿದರು. ಯುವಕ ವೃಂದದ ಕೋಶಾಧಿಕಾರಿ ರಾಜೇಶ್ ಕಾರ್ಮಾರು ನಿರೂಪಿಸಿದರು. ಬಳಿಕ ತತ್ವಮಸಿ ಮಹಿಳಾ ತಂಡ ಸೀತಾಂಗೋಳಿ ಅವರಿಂದ ಕೈಕೊಟ್ಟುಕಳಿ, ಪುತ್ತೂರು ವೈಷ್ಣವೀ ನಾಟ್ಯಾಲಯದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯವೃಂದದವರಿಂದ ಶ್ರೀರಾಮ ಪುನರಾಗಮನ ನೃತ್ಯ ರೂಪಕ ನಡೆಯಿತು.