ಮಾಸ್ಕೊ: ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಣ ಮಾತಿನ ಚಕಮಕಿ ಬಗ್ಗೆ ರಷ್ಯಾ ಪ್ರತಿಕ್ರಿಯಿಸಿದೆ. ಝೆಲೆನ್ಸ್ಕಿ ಅವರಿಗೆ ಹೊಡೆಯದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ತಾವು ತಡೆದುಕೊಂಡಿದ್ದು ಪವಾಡ ಎಂದು ರಷ್ಯಾ ಅಪಹಾಸ್ಯ ಮಾಡಿದೆ.
ಉಭಯ ನಾಯಕರ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ, ಝೆಲೆನ್ಸ್ಕಿದೊಡ್ಡ ಸುಳ್ಳನ್ನು ಶ್ವೇತಭವನದಲ್ಲಿ ಹೇಳಿದ್ದಾರೆ. ಟ್ರಂಪ್ ಹಾಗೂ ಜೆ.ಡಿ ವ್ಯಾನ್ಸ್ ಅವರು ಝೆಲೆನ್ಸ್ಕಿಅವರಿಗೆ ಹೊಡೆಯದಂತೆ ತಡೆದುಕೊಂಡಿದ್ದು ಪವಾಡ ಎಂದು ಹೇಳಿದ್ದಾರೆ.
ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಕೂಡ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, 'ಓವಲ್ ಕಚೇರಿಯಲ್ಲಿ ಸರಿಯಾದ ಹೊಡೆತ ತಿಂದ ಧೈರ್ಯಶಾಲಿ ಹಂದಿ' ಎಂದು ಜರೆದಿದ್ದಾರೆ.
'ಮೊದಲ ಬಾರಿಗೆ ವಿದೂಷಕನ ಮುಖಕ್ಕೆ ಟ್ರಂಪ್ ಸತ್ಯವನ್ನು ಹೇಳಿದ್ದಾರೆ. ಅದು ಒಳ್ಳೆಯದು, ಆದರೆ ಸಾಕಾಗಿಲ್ಲ. ಉಕ್ರೇನ್ ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದೆ' ಎಂದು ರಷ್ಯಾದ ಭದ್ರತಾ ಮಂಡಳಿಯ ಉಪ ಮುಖ್ಯಸ್ಥರೂ ಆಗಿರುವ ಮೆಡ್ವೆಡೆವ್ ಹೇಳಿದ್ದಾರೆ.