ಮೀರಠ್ : ಸೌರಭ್ ರಜಪೂತ್ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಾದಕದ್ರವ್ಯ ಸೇವನೆಯನ್ನು ದಿಢೀರ್ ನಿಲ್ಲಿಸಿದಾಗ ಕಂಡುಬರುವ ಲಕ್ಷಣಗಳು ಅವರಲ್ಲಿ ಕಾಣಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಬುಧವಾರದಿಂದ ಆರೋಪಿಗಳನ್ನು ಚೌದರಿ ಚರಣ್‌ಸಿಂಗ್ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲಾಗಿದೆ.
ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಜೈಲಿನಲ್ಲಿ ಸರಿಯಾಗಿ ನಿದ್ರಿಸುತ್ತಿಲ್ಲ, ಊಟ ಮಾಡುತ್ತಿಲ್ಲ, ನೀರು ಕುಡಿಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಕೊಲೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪಗೊಂಡು ಈ ರೀತಿ ವರ್ತಿಸುತ್ತಿರಬಹುದು ಎಂದು ಕೆಲವರು ಅಂದಾಜಿಸಿದರೆ, ಮಾದಕದ್ರವ್ಯ ಸೇವನೆಯನ್ನು ದಿಢೀರ್ ತ್ಯಜಿಸಿದ್ದರಿಂದ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
'ಇಂಥ ಲಕ್ಷಣಗಳ ನಿಯಂತ್ರಣಕ್ಕಾಗಿ ವೈದ್ಯರು ಔಷಧ ನೀಡಿದ್ದಾರೆ. ತಂಡವೊಂದು ಅವರ ಮೇಲ್ವಿಚಾರಣೆ ಮಾಡುತ್ತಿದೆ. ಇಬ್ಬರೂ ನಿರಂತರವಾಗಿ ಡ್ರಗ್ ಮತ್ತು ಮದ್ಯ ಸೇವಿಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ' ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿರೇಶ್ ರಾಜ್ ಶರ್ಮಾ ತಿಳಿಸಿದರು.
ಮಾ.4ರಂದು ಸೌರಭ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರು ಸೇರಿ ಸೌರಭ್‌ಗೆ ಮದ್ಯ ಕುಡಿಸಿ, ಇರಿದು ಕೊಂದಿದ್ದರು. ನಂತರ ಮೃತದೇಹವನ್ನು ಡ್ರಮ್ ಒಳಗೆ ತುರುಕಿ, ಅದರ ಮೇಲೆ ಸಿಮೆಂಟ್ ಮುಚ್ಚಿದ್ದರು. ಬಳಿಕ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಹೋಗಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದರು.