ನವದೆಹಲಿ: ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಸೂಕ್ತ ಸಮಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಶಾಶ್ವತವಾಗಿ ಶಾಂತಿ ಸ್ಥಾಪಿಸಲು ಮೈತೇಯಿ ಮತ್ತು ಕುಕಿ ಸಮುದಾಯಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
'ಮಣಿಪುರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದ್ದು, ಗೃಹ ಸಚಿವಾಲಯವು ಎರಡೂ ಸಮುದಾಯಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದೆ. ಎರಡೂ ಸಮುದಾಯಗಳು ಪರಸ್ಪರ ಮಾತನಾಡಿದ್ದು, ಪರಿಸ್ಥಿತಿ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ. ಈಗ ಚಿಂತಿಸಲು ಯಾವುದೇ ಕಾರಣವಿಲ್ಲ' ಎಂದು ಶುಕ್ರವಾರ ನಡೆದ 'ಟೈಮ್ಸ್ ನೌ ಶೃಂಗಸಭೆ 2025'ರಲ್ಲಿ ಅಮಿತ್ ಶಾ ಹೇಳಿದ್ದಾರೆ.
ಮಣಿಪುರದಲ್ಲಿ ಕೇಂದ್ರ ಆಡಳಿತ ಹೇರಿಕೆಯಲ್ಲಿ ವಿಳಂಬವಾಗಿದೆಯೇ ಎಂದು ಕೇಳಿದಾಗ, 'ದೂರ ಕುಳಿತು ಅಭಿಪ್ರಾಯ ಹೇಳುವುದು ಸುಲಭ. ಎರಡೂ ಸಮುದಾಯಗಳು ಒಪ್ಪಿಕೊಳ್ಳದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಯಶಸ್ವಿಯಾಗುತ್ತಿರಲಿಲ್ಲ' ಎಂದಿದ್ದಾರೆ.
'ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ'
ಈ ಹಿಂದೆ ನೀಡಿದ ಭರವಸೆಯಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ. ಆದರೆ, ಯಾವಾಗ ರಾಜ್ಯ ಸ್ಥಾನಮಾನ ನೀಡಲಾಗುತ್ತದೆ ಎಂಬುದನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.