ಕಾಸರಗೋಡು :ಜಿಲ್ಲಾ ಪಂಚಾಯಿತಿ 2025-26ನೇ ಸಾಲಿನ ಬಜೆಟನ್ನು ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರ್ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಂಡಿಸಿದರು. ಕಡು ಬಡತನ ನಿವಾರಣೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಡಿಸಿದ ಮಿಗತೆ ಬಜೆಟ್ ಇದಾಗಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡಿಸಲಾಗಿದ್ದು, ಮಾ. 13ರಂದು ಜಿಲ್ಲಾ ಪಂಚಾಯಿತಿ ಸಭೆಯ ನಂತರ ಬಜೆಟ್‍ಗೆ ಅನುಮೋದನೆ ನೀಡಲು ತೀರ್ಮಾನಿಸಲಾಯಿತು. ಒಟ್ಟು ರೂ.972761211 ನಿರೀಕ್ಷಿತ ಆದಾಯ ಮತ್ತು ರೂ.960121000 ನಿರೀಕ್ಷಿತ ವೆಚ್ಚವನ್ನು ಒಳಗೊಂಡಂತೆ ರೂ.12640211 ಮೊತ್ತದ ಮಿಗತೆ ಬಜೆಟ್ ಶಾನವಾಜ್ ಪಾದೂರು ಮಂಡಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿ ಮಾತ್ರವಲ್ಲದೆ ತಲಾ ಆದಾಯ ಹೆಚ್ಚಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಿಸಲು ಬಜೆಟ್‍ನಲ್ಲಿ ಶ್ರಮಿಸಲಾಗುವುದು. ವೃದ್ಧರಿಗೆ ಉತ್ತಮ ಚಿಕಿತ್ಸೆ ಮತ್ತು ಆರೈಕೆಯನ್ನು ಖಾತ್ರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಪಾಲಿಯೇಟವ್ ಗ್ರಿಡ್ ಸ್ಥಾಪಿಸಲಾಗುವುದು. ಮರೆವು ರೋಗಿಗಳಿಗಾಗಿ ವಿಶೇಷ ಕೇಂದ್ರ ಆರಂಭಿಸಲಾಗುವುದು. ವಿಜ್ಞಾನ ಕೇರಳ ಅತ್ಯುತ್ತಮ ಯೋಜನೆ ನಡೆಸುವುದರ ಜತೆಗೆ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಆರ್‍ಡಿಸಿಯನ್ನು ಸಂಯೋಜಿಸಿಕೊಂಡು ಕಾಸರಗೋಡು ಸಫಾರಿ ಆರಂಭಿಸಲಗುವುದು. ನವೆಂಬರ್ 1ರೊಳಗೆ ಕಡು ಬಡವರಿಲ್ಲದ ಜಿಲ್ಲೆಯಾಗಿ ಕಾಸರಗೋಡನ್ನು ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಕಾಡುತ್ತಿರುವ ಮಾದಕದ್ರವ್ಯ ವ್ಯಸನದಿಂದ ಹೊಸ ಪೀಳಿಗೆಯನ್ನು ಮುಕ್ತಗೊಳಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ 'ರಿಥಂ' ಎಂಬ ಸಮಗ್ರ ಯೋಜನೆ ಜಾರಿಗೊಳಿಸಲಾಗುತ್ತಿದೆಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ, ರೈತರ ಕಲ್ಯಾಣ, ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಶಾನವಾಜ್ ಪಾದೂರು ಹೇಳಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರದ ಕೆ.ಶಕುಂತಲಾ, ಎಸ್.ಎನ್.ಸರಿತಾ, ಎಂ.ಮನು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿನೋಜ್ ಚಾಕೊ, ಜೋಮೋನ್ ಜೋಸ್, ಎಂ.ಶೈಲಜಾ ಭಟ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ.ಸುಧಾಕರನ್, ಜಿಲ್ಲಾ ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಕೆ.ಬಾಲಕೃಷ್ಣನ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ಯಾಮಲಕ್ಷ್ಮಿ ಮೊದಲದವರು ಉಪಸ್ಥಿತರಿದ್ದರು.