ಲಖನೌ: 'ರಾಜ್ಯದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. 2017ರಲ್ಲಿ ನಾವು ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ ಕೋಮುಗಲಭೆ ನಡೆದಿಲ್ಲ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಹೇಳಿದರು.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, 'ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸಲ್ಮಾನರೂ ಸುರಕ್ಷಿತವಾಗಿರುತ್ತಾರೆ.
100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ ಸುರಕ್ಷಿತವಾಗಿರುತ್ತದೆ. ಆದರೆ 100 ಮುಸ್ಲಿಂ ಕುಟುಂಬಗಳ ನಡುವೆ ಸುಮಾರು 50 ಹಿಂದೂ ಕುಟುಂಬಗಳಿದ್ದರೂ ಆ ಹಿಂದೂಗಳು ಸುರಕ್ಷಿತವಾಗಿರುತ್ತಾರೆಯೇ? ಇಲ್ಲ' ಎಂದು ಬಾಂಗ್ಲಾದೇಶದ ಉದಾಹರಣೆ ನೀಡಿದರು.
'ಹಿಂದೂಗಳ ಅಂಗಡಿ-ಮನೆಗಳು ಸುಟ್ಟು ಹೋದಲ್ಲಿ, ಮುಸ್ಲಿಮರ ಅಂಗಡಿ-ಮನೆಗಳೂ ಸುಟ್ಟು ಹೋಗುತ್ತವೆ' ಎಂದೂ ಹೇಳಿದರು.
ಇದೇ ವೇಳೆ ಶ್ರೀಕೃಷ್ಣ ಜನ್ಮಭೂಮಿ ಮಥುರಾ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 'ನಾವು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿದ್ದೇವೆ. ಇಲ್ಲದೇ ಹೋದರೆ ಅಲ್ಲಿ ಬಹಳಷ್ಟು ಸಮಸ್ಯೆ ಎದುರಾಗುತ್ತಿತ್ತು' ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು 'ವಿದೂಷಕ' (ನಮೂನಾ) ಎಂದು ಕರೆದ ಅವರು, 'ಇಂತಹ ವಿದೂಷಕರು ಇರಬೇಕು. ಇದರಿಂದ ಬಿಜೆಪಿಗೆ ಲಾಭವಾಗಲಿದೆ' ಎಂದರು.