ವಾಷ್ಟಿಂಗ್ಟನ್: 'ಕಳೆದ ಶುಕ್ರವಾರ ಶ್ವೇತಭವನದಲ್ಲಿ ಏನು ನಡೆದಿದೆಯೋ ಅದಕ್ಕೆ ನಾವು ವಿಷಾದಿಸುತ್ತೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್‌ಗೆ ಸೇನಾ ನೆರವು ಸ್ಥಗಿತಗೊಳಿಸುವ ಟ್ರಂಪ್ ಸರ್ಕಾರದ ನಿರ್ಧಾರದ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷರಿಂದ ಈ ಹೇಳಿಕೆ ಹೊರ ಬಿದ್ದಿದೆ.
'ಉರಕೇನ್‌ನಲ್ಲಿ ಶಾಶ್ವತ ಶಾಂತಿ ನೆಲೆಗೊಳಿಸಲು ಟ್ರಂಪ್ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ನಾವು ಸಿದ್ದ' ಎಂದಿದ್ದಾರೆ.
'ಯುದ್ಧವನ್ನು ಮುಂದುವರಿಸಬೇಕೆಂದು ನಾವು ಬಯಸುತ್ತಿಲ್ಲ. ಈ ವಿಚಾರವಾಗಿ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಸಿದ್ಧವಿದೆ. ಉಕ್ರೇನಿಯನ್ನರಿಗಿಂತ ಶಾಂತಿ ಬಯಸುವವರು ಯಾರೂ ಇಲ್ಲ' ಎಂದು ಎಕ್ಸ್‌ನಲ್ಲಿ ಝೆಲೆನ್‌ಸ್ಕಿ ಹೇಳಿದ್ದಾರೆ.
'ಉಕ್ರೇನ್ ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಅಮೆರಿಕವು ಎಷ್ಟು ಸಹಾಯ ಮಾಡಿದೆ ಎಂಬುದನ್ನು ನಾವು ನಿಜವಾಗಿಯೂ ಸ್ಮರಿಸುತ್ತೇವೆ. ಅಧ್ಯಕ್ಷ ಟ್ರಂಪ್ ಅವರು ಉಕ್ರೇನ್‌ಗೆ ಜಾವೆಲಿನ್ ಕ್ಷಿಪಣಿಗಳನ್ನು ಒದಗಿಸಿರುವುದನ್ನೂ ಮರೆಯುವುದಿಲ್ಲ. ಇದಕ್ಕಾಗಿ ನಾವು ಕೃತಘ್ನರಾಗಿರುತ್ತೇವೆ' ಎಂದಿದ್ದಾರೆ.
'ಶುಕ್ರವಾರ ಶ್ವೇತಭವನದಲ್ಲಿ ನಡೆದ ಘಟನೆಗೆ ವಿಷಾದಿಸುತ್ತೇವೆ. ಆಗಿರುವುದನ್ನು ಸರಿಪಡಿಸಿಕೊಳ್ಳಲು ಇದು ಸೂಕ್ತ ಸಮಯ. ಖನಿಜ ಮತ್ತು ಭದ್ರತಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿಯೂ ಮಾತುಕತೆಗೆ ಉಕ್ರೇನ್ ಸಿದ್ಧವಿದೆ. ಈ ಒಪ್ಪಂದ ಉಕ್ರೇನ್‌ಗೆ ಭದ್ರತಾ ಖಾತರಿ ನೀಡುತ್ತದೆ ಎಂದು ಭಾವಿಸುತ್ತೇವೆ. ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ' ಎಂದು ಹೇಳಿದ್ದಾರೆ.