ನವದೆಹಲಿ: ಸ್ಪೇಡೆಕ್ಸ್ ಉಪಗ್ರಹಗಳ ಡಿ-ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಕುರಿತಾದ ಅನ್ವೇಷಣೆ, ಮಾನವ ಸಹಿತ ಬಾಹ್ಯಾಕಾಶ ಹಾರಾಟ ಮತ್ತು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವಂತಹ ಕಾರ್ಯಾಚರಣೆಗಳಿಗೆ ದಾರಿ ಸುಗಮವಾಗಿದೆ ಎಂದು ಇಸ್ರೊ ಹೇಳಿದೆ.
ಉಪಗ್ರಹಗಳ ಡಿ-ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಎಕ್ಸ್ ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ.
'ಸ್ಪೇಡೆಕ್ಸ್ ಉಪಗ್ರಹಗಳು ಅಭೂತಪೂರ್ವ ಡಿ-ಡಾಕಿಂಗ್ ಅನ್ನು ಸಾಧಿಸಿವೆ. ಇದು ಭಾರತೀಯ ಬಾಹ್ಯಾಕಾಶ ನಿಲ್ದಾನ ಸ್ಥಾಪನೆ, ಚಂದ್ರಯಾನ 4 ಮತ್ತು ಗಗನಯಾನ ಸೇರಿದಂತೆ ಮಹತ್ವಾಕಾಂಕ್ಷೆಯ ಭವಿಷ್ಯದ ಕಾರ್ಯಾಚರಣೆಗಳ ಸುಗಮ ನಿರ್ವಹಣೆಗೆ ದಾರಿ ಮಾಡಿಕೊಡುತ್ತದೆ'ಎಂದು ಸಿಂಗ್ ಹೇಳಿದ್ದಾರೆ.
'ಇಸ್ರೊ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನಿಗೂ ಹೃದಯ ತುಂಬಿ ಬರುತ್ತಿದೆ'ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರೋತ್ಸಾಹವು ಉತ್ಸಾಹವನ್ನು ಹೆಚ್ಚಿಸುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30ರಂದು ಇಸ್ರೊ ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರಯೋಗವನ್ನು ಪ್ರದರ್ಶಿಸಲು ಎರಡು ಉಪಗ್ರಹಗಳನ್ನು (SDX01 ಮತ್ತು SDX02)ಕಕ್ಷೆಗೆ ಸೇರಿಸಿತ್ತು.
ಹಲವು ಪ್ರಯತ್ನಗಳ ನಂತರ, ಬಾಹ್ಯಾಕಾಶ ಸಂಸ್ಥೆ ಜನವರಿ 16ರಂದು ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕ್(ಜೋಡಣೆ) ಮಾಡಿತ್ತು.