ನವದೆಹಲಿ: ದೋಷಪೂರಿತ ಮತದಾರರ ಪಟ್ಟಿ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಸೋಮವಾರ ಪಟ್ಟು ಹಿಡಿದಿದರು.
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ವಿಷಯ ಪ್ರಸ್ತಾಪಿಸಿದರು.
'ಎಪಿಕ್' ಕುರಿತು ಕೂಡಲೇ ಚರ್ಚೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಈ ಬೇಡಿಕೆಯನ್ನು ಸಭಾಪತಿ ತಿರಸ್ಕರಿಸಿದರು. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ಸೌಗತ ರಾಯ್ 'ಮತದಾರರ ಪಟ್ಟಿಯಲ್ಲಿ ದೋಷಗಳಿವೆ' ಎಂದು ದೂರಿದರು.
'ಮುರ್ಷಿದಾಬಾದ್ ಮತ್ತು ಬುರ್ದ್ವಾನ್ ಲೋಕಸಭಾ ಕ್ಷೇತ್ರಗಳು ಹಾಗೂ ಹರಿಯಾಣದಲ್ಲಿ ಒಂದೇ ರೀತಿಯ ಎಪಿಕ್ ಸಂಖ್ಯೆಗಳನ್ನು ಹೊಂದಿರುವ ಮತದಾರರು ಇದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೊಟ್ಟು ಮಾಡಿ ತೋರಿಸಿದ್ದಾರೆ' ಎಂದರು.
'ಈ ಪಟ್ಟಿಯಲ್ಲಿ ಗಂಭೀರ ನ್ಯೂನತೆಗಳಿವೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಇಂತಹ ಘಟನೆಗಳು ನಡೆದಿವೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ನಡೆಯುವ ಸಂಭವ ಇದೆ. ಒಟ್ಟು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಿ. ಪಟ್ಟಿಯಲ್ಲಿ ಆಗಿರುವ ತಪ್ಪುಗಳ ಬಗ್ಗೆ ಚುನಾವಣಾ ಆಯೋಗ ಉತ್ತರಿಸಬೇಕು' ಎಂದು ಆಗ್ರಹಿಸಿದರು.
ಆಗ ಮಧ್ಯಪ್ರವೇಶಿಸಿ ಮಾತನಾಡಿದ ರಾಹುಲ್ ಗಾಂಧಿ 'ಮತದಾರರ ಪಟ್ಟಿಗಳ ಕುರಿತು ಇಡೀ ವಿರೋಧ ಪಕ್ಷವು ಚರ್ಚೆಗೆ ಒತ್ತಾಯಿಸುತ್ತಿದೆ' ಎಂದರು.
'ಮತದಾರರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುವುದಿಲ್ಲ ಎಂಬ ಲೋಕಸಭಾಧ್ಯಕ್ಷ ಓಂಬಿರ್ಲಾ ಅವರ ಹೇಳಿಕೆಯನ್ನು ನಾವು ಒಪ್ಪುತ್ತೇವೆ. ಆದರೆ ಈ ವಿಷಯದ ಕುರಿತು ವಿಸ್ತೃತ ಚರ್ಚೆಯಾಗಬೇಕು. ಇಡೀ ದೇಶದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲಿ ವಿರೋಧ ಪಕ್ಷಗಳು ಏಕ ಧ್ವನಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿವೆ' ಎಂದು ಗಮನ ಸೆಳೆದರು.
ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ 'ದೇಶದಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯುತ್ತಿಲ್ಲ' ಎಂದು ಆರೋಪಿಸಿದರು.
ಎಪಿಕ್ ವಿಷಯದ ಬಗ್ಗೆ ಕೂಡಲೇ ಚರ್ಚೆಯಾಗಬೇಕು ಎಂದು ವಿಪಕ್ಷ ಸದಸ್ಯರು ರಾಜ್ಯಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಸಭಾಪತಿ ಅನುಮತಿ ನೀಡಲಿಲ್ಲ. ಇದರಿಂದ ಕುಪಿತಗೊಂಡ ಸದಸ್ಯರು ಸಭಾತ್ಯಾಗ ಮಾಡಿದರು.
'ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ಸದನದಲ್ಲಿ ಚರ್ಚೆಗೆ ಕೆಲವು ನಿಯಮಗಳಿವೆ. ಅವರು ಚರ್ಚೆ ನಡೆಸಲು ಆಸಕ್ತರಾಗಿಲ್ಲ. ನಿಯಮ 267ರಡಿ ಸದನದ ವ್ಯವಹಾರಗಳನ್ನು ಸ್ಥಗಿತಗೊಳಿಸಿ ನಿರ್ದಿಷ್ಟ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂದು ನೋಟಿಸ್ ನೀಡುವುದು ಸರಿಯಲ್ಲ. ಇದು ಕಲಾಪವನ್ನು ಹಾಳು ಮಾಡುವ ದುಷ್ಟ ಸಂಚು ಎಂದು ಸಭಾನಾಯಕ ಜೆ.ಪಿ.ನಡ್ಡಾ ಕಿಡಿಕಾರಿದರು.
ಆರಂಭದಲ್ಲಿ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಆಗ ಅವರು ಎಪಿಕ್ ಬಗ್ಗೆ ಪ್ರಸ್ತಾಪಿಸಿದರು. ಉಪಸಭಾಪತಿ ಹರಿವಂಶ್ ಅವಕಾಶ ನಿರಾಕರಿಸಿದರು. ನೋಟಿಸ್‌ಗಳನ್ನು ತಿರಸ್ಕರಿಸಿದ್ದಕ್ಕೆ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. ಚುನಾವಣಾ ಆಯೋಗದ ಲೋಪಗಳ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಟಿಎಂಸಿಯ ಸಾಕೇತ್ ಗೋಖಲೆ ಸಾಗರಿಕಾ ಘೋಷ್ ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಹಾಗೂ ಅಜಯ್ ಮಾಕನ್ ನೋಟಿಸ್ ನೀಡಿದರು.