ನವದೆಹಲಿ: ದೇಶೀಯವಾಗಿ ನಿರ್ಮಿತ ತೇಜಸ್ ಹಗುರ ಯುದ್ಧ ವಿಮಾನದಿಂದ (ಎಲ್‌ಸಿಎ) ಅಸ್ತ್ರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.
ಬುಧವಾರದಂದು (ಮಾರ್ಚ್ 12) ಈ ಪರೀಕ್ಷೆ ನಡೆಸಲಾಯಿತು. ದೇಶಿ ನಿರ್ಮಿತ ಅಸ್ತ್ರ, ಏರ್-ಟು-ಏರ್ (ಗಾಳಿಯಿಂದ ಗಾಳಿಗೆ ದಾಳಿ ನಡೆಸಬಲ್ಲ) ಮಿಸೈಲ್ ಆಗಿದೆ.
ಒಡಿಶಾದ ಚಾಂದಿಪುರ ಕರಾವಳಿಯಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಹಮ್ಮಿಕೊಂಡಿತು. ಈ ಸಂಬಂಧ ಚಿತ್ರವನ್ನು ಹಂಚಿಕೊಂಡಿದೆ.
ಈ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದ್ದು, ಎಲ್ಲ ಉದ್ದೇಶಗಳನ್ನು ನಿಖರವಾಗಿ ಈಡೇರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅಸ್ತ್ರ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಅಭಿವೃದ್ಧಿಪಡಿಸಲಾಗಿದೆ. 100 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಈ ಕ್ಷಿಪಣಿಯು ಸುಧಾರಿತ ಗೈಡನ್ಸ್ ಮತ್ತು ನೇವಿಗೇಷನ್ ವ್ಯವಸ್ಥೆಯನ್ನು ಹೊಂದಿದ್ದು, ಹೆಚ್ಚಿನ ನಿಖರತೆಯೊಂದಿಗೆ ಗುರಿಯನ್ನು ನಾಶಮಾಡಲು ಸಹಕಾರಿಯಾಗಲಿದೆ.
ಅಸ್ತ್ರ ಕ್ಷಿಪಣಿಯನ್ನು ಈಗಾಗಲೇ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ.
ಈ ಯಶಸ್ವಿ ಪ್ರಯೋಗವು ತೇಜಸ್ ಎಲ್‌ಸಿಎ ಎಫ್ ಎಂಕೆ1ಎ ಯುದ್ಧ ವಿಮಾನದ ಕಾರ್ಯಕ್ಷಮತೆಯಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ.