ಕೈರೊ: ಗಾಜಾ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಜಾರಿಗೆ ತಂದರೆ ಮಾತ್ರ ಅಮೆರಿಕ ಮತ್ತು ಇಸ್ರೇಲ್‌ನ ಇತರ ನಾಲ್ವರು ಒತ್ತೆಯಾಳುಗಳ ಶವಗಳನ್ನು ಹಸ್ತಾಂತರಿಸುವುದಾಗಿ ಹಮಾಸ್ ಶನಿವಾರ ಹೇಳಿದೆ.
ಕದನ ವಿರಾಮ ಒಪ್ಪಂದವನ್ನು ಮತ್ತೆ ಸರಿದಾರಿಗೆ ತರುವ ಗುರಿಯನ್ನು ಹೊಂದಿರುವ ಈ ಷರತ್ತನ್ನು 'ಅಸಾಧಾರಣ ಒಪ್ಪಂದ' ಎಂದು ಅದು ಹೇಳಿಕೊಂಡಿದೆ.
ಹಮಾಸ್ ಬಂಡುಕೋರರ ಬಳಿ ಇನ್ನೂ 59 ಮಂದಿ ಒತ್ತೆಯಾಳುಗಳು ಇದ್ದು, 35 ಮಂದಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ಫೆಬ್ರುವರಿ ಆರಂಭದಲ್ಲಿ ಕದನ ವಿರಾಮದ ಎರಡನೇ ಹಂತದ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಪೂರ್ವಸಿದ್ಧತಾ ಮಾತುಕತೆಗಳು ಮಾತ್ರ ನಡೆದಿವೆ. ಎರಡನೇ ಹಂತದಲ್ಲಿ, ಹಮಾಸ್ ಶಾಶ್ವತವಾದ ಒಪ್ಪಂದಕ್ಕೆ ಪ್ರತಿಯಾಗಿ, ತನ್ನಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಿದೆ.
ಈ ನಡುವೆ, ಇಸ್ರೇಲ್ ನಡೆಸಿದ ವಾಯು ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಒಂಬತ್ತು ಜನರು ಹತರಾಗಿದ್ದಾರೆ. ಇವರನ್ನು ಉಗ್ರರು ಎಂದು ಇಸ್ರೇಲ್ ಸೇನೆ ಗುರುತಿಸಿದೆ. ಆದರೆ, ಇದನ್ನು ಅಲ್ಲಗಳೆದಿರುವ ಬ್ರಿಟನ್ ಮೂಲದ ಪರಿಹಾರ ತಂಡ ಅಲ್ ಖೈರ್ ಫೌಂಡೇಷನ್, ಹತರಾಗಿರುವರಲ್ಲಿ ಎಂಟು ಮಂದಿ ತನ್ನ ತಂಡದ ಸದಸ್ಯರು ಎಂದು ಹೇಳಿದೆ.