ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2 ಸಾವಿರ ಕಿಲೊನ್ಯೂಟನ್ ಸಾಮರ್ಥ್ಯದ ಸೆಮಿಕ್ರಯೊಜನಿಕ್ ಎಂಜಿನ್‌ನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಎಂಜಿನ್ ಅನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದು, ಉಪಗ್ರಹ ಉಡ್ಡಯನ ವಾಹನ ತಂತ್ರಜ್ಞಾನ ವ್ಯವಸ್ಥೆ ಮಾರ್ಕ್-3ರ (ಎಲ್‌ಎಂವಿ-3) ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಇಸ್ರೊ ಹೇಳಿದೆ.
'ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೊ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಯಿತು. 2.5 ಸೆಕೆಂಡ್‌ಗಳ ಅವಧಿಯಲ್ಲಿ ನಡೆದ ಈ ಯಶಸ್ವಿ ಪರೀಕ್ಷೆಯು, ಸೆಮಿಕ್ರಯೊಜನಿಕ್ ಎಂಜಿನ್ (ಲಿಕ್ವಿಡ್ ಆಕ್ಸಿಜನ್/ಕೆರೊಸಿನ್ ಎಂಜಿನ್) ಅಭಿವೃದ್ಧಿ ಯೋಜನೆಯ ಮಹತ್ವದ ಘಟ್ಟವಾಗಿದೆ' ಎಂದು ಇಸ್ರೊ ಶನಿವಾರ ತಿಳಿಸಿದೆ.
ಸದ್ಯ ಎಲ್‌ಎಂವಿ-3 ರಾಕೆಟ್‌ಗಳಲ್ಲಿ ಬಳಸಲಾಗುತ್ತಿರುವ ಲಿಕ್ವಿಡ್ ಪ್ರೊಫೆಲೆಂಟ್ ಆಧಾರಿತ ಎಲ್110 ಎಂಜಿನ್ ಬದಲಿಗೆ, ಅಧಿಕ ಭಾರ ಹೊರುವ ಸಾಮರ್ಥ್ಯವಿರುವ ಈ ಸೆಮಿಕ್ರಯೊಜನಿಕ್ ಎಂಜಿನ್ (ಎಸ್‌ಇ2000) ಅನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು ಎಂದು ಇಸ್ರೊ ಮಾಹಿತಿ ನೀಡಿದೆ.
ಎಲ್‌ಎಂವಿ-3 ರಾಕೆಟ್‌ಗಳಲ್ಲಿ ಸೆಮಿಕ್ರಯೊಜನಿಕ್ ಎಂಜಿನ್ ಅಳವಡಿಸಿದಲ್ಲಿ, ನಭಕ್ಕೆ ಭಾರ ಹೊತ್ತೊಯ್ಯುವ ಸಾಮರ್ಥ್ಯವನ್ನು 5 ಟನ್‌ಗೆ ವೃದ್ಧಿಸಲಿದೆ ಎಂದು ತಿಳಿಸಿದೆ.
ಸೆಮಿಕ್ರಯೊಜನಿಕ್ ಎಂಜಿನ್‌ನ ಪರೀಕ್ಷೆ