ನವದೆಹಲಿ: "ಭಾರತ ಅಮೇರಿಕಾಗೆ ವಿಧಿಸುತ್ತಿದ್ದ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತೀಯ ರೈತರು ಮತ್ತು ಉತ್ಪಾದಕರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
"ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅಮೆರಿಕನ್ನರೊಂದಿಗೆ ವ್ಯಾಪಾರ ಮಾತುಕತೆ ನಡೆಸಲು ವಾಷಿಂಗ್ಟನ್ ಡಿಸಿಯಲ್ಲಿದ್ದಾರೆ. ಏತನ್ಮಧ್ಯೆ, ಅಧ್ಯಕ್ಷ ಟ್ರಂಪ್ ಭಾರತ ಅಮೆರಿಕಾಗೆ ವಿಧಿಸುತ್ತಿರುವ ಸುಂಕ ಕಡಿಮೆ ಮಾಡಲಿದೆ ಎಂದು ಹೇಳುತ್ತಾರೆ" ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಅಮೆರಿಕ ಅಧ್ಯಕ್ಷರು ವ್ಯಾಪಾರ ಸುಂಕಗಳ ಕುರಿತು ಮಾತನಾಡುವ ವೀಡಿಯೊವನ್ನು ಟ್ಯಾಗ್ ಮಾಡಿದ್ದಾರೆ.
ಭಾರತವು ತನ್ನ ಸುಂಕಗಳನ್ನು "ತೀವ್ರವಾಗಿ ಕಡಿಮೆ" ಮಾಡಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಮೇಶ್ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, "ಮೋದಿ ಸರ್ಕಾರ ಯಾವುದಕ್ಕೆ ಒಪ್ಪಿಕೊಂಡಿದೆ? ಭಾರತೀಯ ರೈತರು ಮತ್ತು ಭಾರತೀಯ ಉತ್ಪಾದನೆಯ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆಯೇ? ಮಾರ್ಚ್ 10 ರಂದು ಸಂಸತ್ತು ಪುನರಾರಂಭವಾದಾಗ ಪ್ರಧಾನಿ ಅವರು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಬಜೆಟ್ ಅಧಿವೇಶನದ ಎರಡನೇ ಭಾಗ ಪುನರಾರಂಭವಾದಾಗ ಸಂಸತ್ತಿನ ಎರಡೂ ಸದನಗಳು ಸೋಮವಾರ ಸಭೆ ಸೇರಲಿವೆ.
ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಲವಾರು ದೇಶಗಳಿಗೆ ವ್ಯಾಪಾರ ಸುಂಕಗಳನ್ನು ಹೆಚ್ಚಿಸುವ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ. ಏಪ್ರಿಲ್ 2 ರಿಂದ ಭಾರತದ ಮೇಲೆ ವಾಷಿಂಗ್ಟನ್‌ನ ಪರಸ್ಪರ ಸುಂಕಗಳು ಜಾರಿಗೆ ಬರಲಿರುವ ಮುನ್ನ, ಈ ವಾರ ಮೂರನೇ ಬಾರಿಗೆ ಭಾರತದ ಹೆಚ್ಚಿನ ಸುಂಕಗಳನ್ನು ಟೀಕಿಸಿದ್ದಾರೆ.
ಕಳೆದ ತಿಂಗಳು, ಟ್ರಂಪ್ ಅವರು ವಾಷಿಂಗ್ಟನ್‌ನ ಪರಸ್ಪರ ಸುಂಕಗಳನ್ನು ವಿಧಿಸುವುದರಿಂದ "ಭಾರತವನ್ನು ಹೊರತುಪಡಿಸಲಾಗುವುದಿಲ್ಲ" ಎಂದು ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ನೀಡಿದ್ದರು, ಸುಂಕ ರಚನೆಯ ಕುರಿತು "ಯಾರೂ ನನ್ನೊಂದಿಗೆ ವಾದಿಸಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದರು.
ಫೆಬ್ರವರಿ 13 ರಂದು, ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಮೋದಿ ಅವರ ದ್ವಿಪಕ್ಷೀಯ ಸಭೆಗೆ ಗಂಟೆಗಳ ಮೊದಲು, ಯುಎಸ್ ಅಧ್ಯಕ್ಷರು ಪರಸ್ಪರ ಸುಂಕಗಳನ್ನು ಘೋಷಿಸಿದರು.