ವಾಷಿಂಗ್ಟನ್: ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆಯನ್ನು 2021ರಲ್ಲಿ ವಾಪಸ್ ಕರೆಸಿಕೊಳ್ಳುವಾಗ ಕಾಬೂಲ್ ವಿಮಾನ ನಿಲ್ದಾಣದ ಸಮೀಪ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯ ಸೂತ್ರಧಾರಿ, ಐ.ಎಸ್ ಉಗ್ರನನ್ನು ಬಂಧಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ.
ತಮ್ಮ ಎರಡನೇ ಅವಧಿಯ ಆಡಳಿತ ಆರಂಭಿದ ನಂತರ ಕಾಂಗ್ರೆಸ್ ಉದ್ದೇಶಿಸಿ ಮಾಡಿದ ಮೊದಲ ಭಾಷಣದ ವೇಳೆ ಅವರು, 'ಆ ದಾಳಿಗೆ ಕಾರಣವಾದ ಪ್ರಮುಖ ಭಯೋತ್ಪಾದಕನ ಬಂಧನಕ್ಕೆ ಪಾಕಿಸ್ತಾನ ನಮಗೆ ಸಹಾಯ ಮಾಡಿದೆ' ಎಂದು ಹೇಳಿದರು.
ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನದ ನಿಲ್ದಾಣದ ಸಮೀಪ 2021ರ ಆಗಸ್ಟ್ 26ರಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಇದರಲ್ಲಿ 170 ಮಂದಿ ಅಫ್ಗಾನಿಸ್ಥಾನಿಯರು ಮತ್ತು 13 ಮಂದಿ ಅಮೆರಿಕ ಸೈನಿಕರು ಹತರಾಗಿದ್ದರು.
'ಈ ರಾಕ್ಷಸನನ್ನು ಬಂಧಿಸಲು ಪಾಕಿಸ್ತಾನ ನಮಗೆ ನೆರವಾಗಿದೆ' ಎಂದು ಕೃತಜ್ಞತೆ ಸಲ್ಲಿಸಿದ ಟ್ರಂಪ್, 'ಈಗ ಅವನು ಅಮೆರಿಕದ ತ್ವರಿತ ನ್ಯಾಯದ ಕತ್ತಿಯನ್ನು ಎದುರಿಸಬೇಕಿದೆ' ಎಂದು ಹೇಳಿದರು.
ಸಿಐಎ ನೀಡಿದ ಸುಳಿವು ಆಧರಿಸಿ, ಪಾಕಿಸ್ತಾನದ ಐಎಸ್‌ಐ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಆಶ್-ಶಾಮ್-ಖೋರಾಸನ್ ಪ್ರಾಂತ್ಯದ (ಐಎಸ್‌ಐಎಸ್-ಕೆ) ಕಾರ್ಯಾಚರಣೆಯ ಪ್ರಮುಖ ಕಮಾಂಡರ್ ಆಗಿರುವ ಮೊಹಮ್ಮದ್ ಷರೀಫುಲ್ಲಾನನ್ನು ಬಂಧಿಸಿದೆ. ಈತ ಆತ್ಮಾಹುತಿ ಬಾಂಬ್ ಸ್ಫೋಟ ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಫ್ಘಾನಿಸ್ತಾನದ ಪ್ರಜೆಯಾಗಿರುವ ಷರೀಫುಲ್ಲಾನನ್ನು ಪಾಕಿಸ್ತಾನದಿಂದ ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಎಫ್‌ಬಿಐ ಶೀಘ್ರದಲ್ಲೇ ವರ್ಜೀನಿಯಾದ ಜಿಲ್ಲಾ ನ್ಯಾಯಾಲಯದ ಮುಂದೆ ಈತನನ್ನು ಹಾಜರುಪಡಿಸುವ ಸಾಧ್ಯತೆಯಿದೆ.
ಕಾಬೂಲ್‌ನಲ್ಲಿನ ಕೆನಡಾದ ರಾಯಭಾರ ಕಚೇರಿಯ ಮೇಲೆ ನಡೆದ ಭಯೋತ್ಪಾದಕ ದಾಳಿ, 2024ರ ಮಾರ್ಚ್ 22ರಂದು ರಷ್ಯಾದ ಮಾಸ್ಕೊದಲ್ಲಿನ ಕ್ರೋಕಸ್ ಸಿಟಿ ಹಾಲ್ ಮೇಲೆ ಭಯೋತ್ಪಾದಕ ದಾಳಿ ನಡೆಸಿ, ಬಂಧಿತರಾದ ನಾಲ್ವರು ಉಗ್ರರ ಪೈಕಿ ಇಬ್ಬರಿಗೆ ತರಬೇತಿ ನೀಡಿದ ಆರೋಪ ಷರೀಫುಲ್ಲಾ ಮೇಲಿದೆ.
'ಅಫ್ಗಾನಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹದ ಪ್ರಯತ್ನಗಳಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಬೆಂಬಲವನ್ನು ಟ್ರಂಪ್ ಪ್ರಶಂಸಿಸಿದ್ದಾರೆ. ಟ್ರಂಪ್ ಅವರಿಗೆ ಧನ್ಯವಾದ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ನಾವು ಅಮೆರಿಕದ ಜತೆಗೆ ನಿಕಟ ಪಾಲುದಾರರಾಗುತ್ತೇವೆ' ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ 'ಎಕ್ಸ್' ಮಾಡಿದ್ದಾರೆ.