ಬಿಲಾಸ್ಪುರ: ಕಾಂಗ್ರೆಸ್ ನೀತಿಗಳಿಂದಾಗಿ ದಶಕಗಳಿಂದ ಛತ್ತೀಸಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಬಿಲಾಸ್ಪುರ ಜಿಲ್ಲೆಯ ಮೊಹಭಟ್ಟಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಹೊಸ ಯುಗ ಆರಂಭವಾಗಿದೆ ಎಂದು ಹೇಳಿದ್ದಾರೆ.
'ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ನಕ್ಸಲಿಸಂ ಪ್ರವರ್ಧಮಾನಕ್ಕೆ ಬಂದಿತು, ಆದರೆ 60 ವರ್ಷಗಳ ಕಾಲ ಸರ್ಕಾರವನ್ನು ನಡೆಸಿದ ಪಕ್ಷ ಏನು ಮಾಡಿತು?. ಅಂತಹ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಘೋಷಿಸಿ ತನ್ನ ಜವಾಬ್ದಾರಿಯಿಂದ ವಿಮುಖವಾಯಿತು' ಎಂದು ಪ್ರಧಾನಿ ದೂರಿದ್ದಾರೆ.
ಮಾವೋವಾದಿ ಹಿಂಸಾಚಾರದಲ್ಲಿ ಅನೇಕ ತಾಯಂದಿರು ತಮ್ಮ ಪ್ರೀತಿಯ ಪುತ್ರರನ್ನು, ಅನೇಕ ಸಹೋದರಿಯರು ತಮ್ಮ ಸಹೋದರರನ್ನು ಕಳೆದುಕೊಂಡಿದ್ದಾರೆ.
'ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ, ಛತ್ತೀಸಗಢದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳಿಂದಾಗಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಹೊಸ ಯುಗ ಶುರುವಾಗಿದೆ' ಎಂದೂ ಅವರು ಹೇಳಿದ್ದಾರೆ.