ನವದೆಹಲಿ: ಎನ್‌ಸಿಪಿ ಮತ್ತು ಎನ್‌ಸಿಪಿ-ಎಸ್‌ಪಿಗೆ ಸೇರಿದ ಮೂವರು ಸಂಸದರನ್ನು ಸದನದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಶುಕ್ರವಾರ ವಿಲೇವಾರಿ ಮಾಡಿದರು.
ರಾಜ್ಯಸಭಾ ಸದಸ್ಯರ (ಪಕ್ಷಾಂತರ ಆಧಾರಿತ ಅನರ್ಹತೆ) ನಿಯಮಗಳು, 1985ರ ನಿಯಮ 6 (2)ರ ಅಡಿಯಲ್ಲಿ 2023ರ ನವೆಂಬರ್ 20ರಂದು ಪ್ರಫುಲ್ ಪಟೇಲ್ ಅವರು ರಾಜ್ಯಸಭೆಯ ಸದಸ್ಯರಾದ ವಂದನಾ ಚವಾಣ್ ಮತ್ತು ಫೌಜಿಯಾ ಖಾನ್ ಅವರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ಇದೇ ರೀತಿಯ ಅರ್ಜಿಯನ್ನು ಪ್ರಫುಲ್ ಪಟೇಲ್ ವಿರುದ್ಧ ಚವಾಣ್ ಅದೇ ವರ್ಷದ ನ.21ರಂದು ಸಲ್ಲಿಸಿದ್ದರು.
ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳದಂತೆ ಕೋರಿ ಎನ್‌ಸಿ-ಎಸ್‌ಪಿ ನಾಯಕ ಶರದ್ ಪವಾರ್ ಮತ್ತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಂದ ಬಂದಿರುವ ಅರ್ಜಿಗಳನ್ನು 2025 ಫೆ.3ರಂದು ಸ್ವೀಕರಿಸಲಾಗಿದೆ. ಈ ಕೋರಿಕೆ ಪರಿಗಣಿಸಿ, ಅರ್ಜಿಗಳನ್ನು ವಿಲೇವಾರಿ ಮಾಡುತ್ತಿರುವುದಾಗಿ ಧನಕರ್ ಬೆಳಗಿನ ಅಧಿವೇಶನದಲ್ಲಿ ಪ್ರಕಟಿಸಿದರು.
ಅಧಿಕಾರಾವಧಿ ಪೂರ್ಣಗೊಳಿಸಿರುವ ವಂದನಾ ಚವಾಣ್ ಅವರ ರಾಜ್ಯಸಭಾ ಸದಸ್ಯತ್ವ 2024ರ ಏಪ್ರಿಲ್ 2ರಂದು ಕೊನೆಗೊಂಡಿದೆ. ಪಟೇಲ್ ಅವರು 2024ರ ಫೆಬ್ರುವರಿ 27ರಂದು ರಾಜೀನಾಮೆ ನೀಡಿದ್ದರು. ಅಲ್ಲದೆ, 2024ರ ಏಪ್ರಿಲ್ 3ರಿಂದ ಜಾರಿಗೆ ಬರುವಂತೆ ಆರು ವರ್ಷಗಳ ಅವಧಿಗೆ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದರು. ಫೌಜಿಯಾ ಖಾನ್ ಅವರ ಅಧಿಕಾರಾವಧಿಯು 2026ರ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ.