ನವದೆಹಲಿ: 'ಮಿಯಾಂ-ತಿಯಾಂ' ಎನ್ನುವುದು, 'ಪಾಕಿಸ್ತಾನಿ' ಎಂದು ಕರೆಯುವುದು ಕೆಟ್ಟ ಅಭಿರುಚಿಯಿಂದ ಕೂಡಿರುವುದಾದರೂ ಅದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಾರ್ಖಂಡ್‌ನ ಉಪ ವಿಭಾಗೀಯ ಕಚೇರಿಯಲ್ಲಿ ಮಾಹಿತಿ ಹಕ್ಕು ಶಾಖೆಯ ಹಂಗಾಮಿ ಗುಮಾಸ್ತ, ಉರ್ದು ಅನುವಾದಕರೊಬ್ಬರು ಸಲ್ಲಿಸಿದ್ದ ದೂರಿನಲ್ಲಿ ಆರೋಪಿಯಾಗಿದ್ದ ಹರಿನಂದನ್ ಸಿಂಗ್ ಎನ್ನುವವರನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ.ಶರ್ಮ ಅವರು ಇರುವ ವಿಭಾಗೀಯ ಪೀಠವು ದೋಷಮುಕ್ತಗೊಳಿಸಿದೆ.
'ದೂರುದಾರರನ್ನು ಮಿಯಾಂ-ತಿಯಾಂ ಮತ್ತು ಪಾಕಿಸ್ತಾನಿ ಎಂದು ಕರೆದು ಅವರ ಧಾರ್ಮಿಕ ಭಾವನೆಗಳಿಗೆ ಮೇಲ್ಮನವಿದಾರರು (ಸಿಂಗ್) ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಾತುಗಳು ಕೆಟ್ಟ ಅಭಿರುಚಿಯವು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇವು ದೂರುದಾರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥವಲ್ಲ' ಎಂದು ಫೆಬ್ರುವರಿ 11ರಂದು ನೀಡಿರುವ ತೀರ್ಪಿನಲ್ಲಿ ಪೀಠ ಸ್ಪಷ್ಟಪಡಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಮೇಲ್ಮನವಿ ಪ್ರಾಧಿಕಾರವು ಸಿಂಗ್ ಅವರಿಗೆ ಕೆಲವು ಮಾಹಿತಿಯನ್ನು ಖುದ್ದಾಗಿ ತಲುಪಿಸುವಂತೆ ಅನುವಾದರಿಗೆ ಸೂಚಿಸಿತ್ತು. ಅನುವಾದಕ 2020ರ ನವೆಂಬರ್ 18ರಂದು ಸಿಂಗ್ ಅವರ ಮನೆಗೆ ಮಾಹಿತಿ ನೀಡಲು ತೆರಳಿದ್ದರು. ಆ ಸಂದರ್ಭದಲ್ಲಿ ಸಿಂಗ್ ಅವರು ಅನುವಾದಕರನ್ನು ಅವರ ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ ನಿಂದಿಸಿದ್ದರು, ಕ್ರಿಮಿನಲ್ ಕೃತ್ಯ ಎಸಗುವ ಉದ್ದೇಶದಿಂದ ಬಲಪ್ರಯೋಗ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ವಿಚಾರವಾಗಿ ಎಫ್‌ಐಆರ್ ದಾಖಲಾಗಿತ್ತು.
ತನಿಖೆ ನಂತರ ವಿಚಾರಣಾ ನ್ಯಾಯಾಲಯವು ಸಿಂಗ್ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ಆದೇಶಿಸಿತ್ತು. ಇದನ್ನು ರದ್ದುಪಡಿಸಬೇಕು ಎಂದು ಕೋರಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.