ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಮಂಗಳವಾರ (ಮಾ.18) ಇಲ್ಲಿ ಸಮಾಲೋಚನಾ ಸಮಿತಿ ಸಭೆಯನ್ನು ನಡೆಸಲಿದ್ದಾರೆ.
ಈ ಸಭೆಯಲ್ಲಿ ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ಪ್ರದೇಶದಿಂದಲೂ ಆಯಾ ರಾಜ್ಯಗಳ ಜಲಸಂಪನ್ಮೂಲ ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
2024ರ ಜನವರಿಯಲ್ಲಿ, ಕರ್ನಾಟಕದ ಕೋರಿಕೆಯ ಮೇರೆಗೆ ಹೊಸ ಸಮಾಲೋಚನಾ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮಧ್ಯಸ್ಥಿಕೆ ವಹಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅಂತರ ರಾಜ್ಯ ನದಿ ನೀರು ವಿವಾದಗಳ ಕಾಯ್ದೆ, 1956ರ ಸೆಕ್ಷನ್ 4ರ ಅಡಿಯಲ್ಲಿ ಈ ಸಮಿತಿ ರಚಿಸಲಾಗಿದೆ.
'ಕೇಂದ್ರ ಜಲ ಆಯೋಗವು (ಸಿಡಬ್ಲ್ಯೂಸಿ) ಕಳೆದ ಒಂದು ವರ್ಷದಲ್ಲಿ ಹಲವು ಸಭೆಗಳನ್ನು ನಡೆಸಿದೆ. ಇದರಲ್ಲಿ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದ ಪ್ರಸ್ತಾಪವನ್ನು ತಮಿಳುನಾಡು ಮತ್ತು ಪುದುಚೇರಿ ವಿರೋಧಿಸಿದವು. ಅಲ್ಲದೆ, ಈ ವಿಷಯದಲ್ಲಿ ಸಿಡಬ್ಲ್ಯುಸಿಯ ಸಲಹೆಯನ್ನು ಸಹ ವಿರೋಧಿಸಿದವು. ಅಧಿಕಾರಿಗಳ ಮಟ್ಟದ ಸಭೆಗಳು ವಿವಾದ ಬಗೆಹರಿಸುವಲ್ಲಿ ವಿಫಲವಾಗಿದ್ದವು. ಹಾಗಾಗಿ, ಕೇಂದ್ರ ಸಚಿವರು, ಸಚಿವರ ಮಟ್ಟದ ಸಭೆ ನಡೆಸಲು ನಿರ್ಧರಿಸಿದ್ದಾರೆ' ಎಂದು ಜಲ ಶಕ್ತಿ ಸಚಿವಾಲಯದ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
2024ರ ಜನವರಿಯಲ್ಲಿ, ಕರ್ನಾಟಕದ ಕೋರಿಕೆಯ ಮೇರೆಗೆ ಹೊಸ ಸಮಾಲೋಚನಾ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮಧ್ಯಸ್ಥಿಕೆ ವಹಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅಂತರ ರಾಜ್ಯ ನದಿ ನೀರು ವಿವಾದಗಳ ಕಾಯ್ದೆ, 1956ರ ಸೆಕ್ಷನ್ 4ರ ಅಡಿಯಲ್ಲಿ ಈ ಸಮಿತಿ ರಚಿಸಲಾಗಿದೆ. ವಿವಾದ ಬಗೆಹರಿಸಲು ಜಲ ವಿವಾದ ನ್ಯಾಯಮಂಡಳಿ ರಚಿಸಬೇಕೆಂದು ತಮಿಳುನಾಡು ಒತ್ತಾಯಿಸುತ್ತಿದ್ದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕವು, ಈ ನದಿಯ ನೀರಿನ ಲಭ್ಯತೆಯು ಕಡಿಮೆ ಇದ್ದು, ಮಳೆಗಾಲದಲ್ಲಿ ಮಾತ್ರ ನೀರಿನ ಹರಿವು ಇರುವುದರಿಂದ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡುತ್ತಿದೆ.