ಮಧುರೈ: ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರವು 'ವಿಫಲ ಮಾದರಿ' ಎಂದು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ. ಅಲ್ಲದೆ ರಾಜ್ಯದ ದ್ವಿಭಾಷ ಮಾದರಿ ಯಶಸ್ವಿಯಾಗಿರುವಾಗ ದೂಷಪೂರಿತ ತ್ರಿಭಾಷ ಸೂತ್ರ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ..
ಮಧುರೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ್ಞಾನ ಮತ್ತು ಬುದ್ಧಿವಂತಿಕೆ ಇರುವ ಯಾರಾದರೂ ವಿಫಲ ಮಾದರಿಯನ್ನು ಸ್ವೀಕರಿಸುವುದಿಲ್ಲ. 1968ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದರೂ, ತಮಿಳುನಾಡಿನ ಎಲ್ಲಿಯೂ ತ್ರಿಭಾಷ ಸೂತ್ರವನ್ನು ಜಾರಿಗೊಳಿಸಲೇ ಇಲ್ಲ. ದ್ವಿಭಾಷ ಸೂತ್ರ ಅಳವಡಿಕೊಂಡ ತಮಿಳುನಾಡು ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಕಂಡಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ದ್ವಿತೀಯ ಭಾಷೆ ಇಂಗ್ಲೀಷ್ ಅನ್ನು ಸರಿಯಾಗಿ ಕಲಿಸಿದ್ದೇ ಆಗಿದ್ದರೆ, ತ್ರಿಭಾಷ ಸೂತ್ರ ಉದ್ಭವಿಸುತ್ತಲೇ ಇರಲಿಲ್ಲ. ಯಾವುದೇ ಭಾಷೆಯನ್ನು ಹೇರುವ ಅಧಿಕಾರ ಅಥವಾ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ. ಎರಡು ಭಾಷೆಗಳ ಬೋಧನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಅವರಿಂದ ಸಾಧ್ಯವಾಗಲಿಲ್ಲ. ಆದಾಗ್ಯೂ, ತಮಿಳುನಾಡು ಎರಡು ಭಾಷಾ ಸೂತ್ರವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರದ ಬಗ್ಗೆ ನಡೆಯುತ್ತಿರುವ ಹಗ್ಗಜಗ್ಗಾಟದ ನಡುವೆಯೇ ಅವರಿಂದ ಈ ಹೇಳಿಕೆ ಬಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು 'ವಿನಾಶಕಾರಿ ನಾಗ್ಪುರ ಯೋಜನೆ' ಎಂದು ಟೀಕಿಸಿದ್ದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರ ₹10,000 ಕೋಟಿ ನೀಡಿದರೂ, ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು.