ಹೋಶಿಯಾರ್‌ಪುರ: ರಾಜ್ಯದಲ್ಲಿ ಗ್ಯಾಂಗ್‌ಸ್ಟರ್, ಕ್ರಿಮಿನಲ್‌ಗಳು ಮತ್ತು ಇತರೆ ಸಮಾಜವಿರೋಧಿಗಳಿಗೆ ಯಾವುದೇ ಜಾಗವಿಲ್ಲ. ಅಂತವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಭಾನುವಾರ) ತಿಳಿಸಿದ್ದಾರೆ.
2,490 ಪೊಲೀಸರ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರದೃಷ್ಟವಶಾತ್ ಹಿಂದಿನ ಸರ್ಕಾರಗಳ ಬೆಂಬಲದೊಂದಿಗೆ ದರೋಡೆಕೋರರು, ಅಪರಾಧಿಗಳು ನಮ್ಮ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ರಾಜ್ಯ ಸರ್ಕಾರವು, ಶೀಘ್ರದಲ್ಲೇ ಅಪರಾಧಿಗಳನ್ನು ಜೈಲಿಗೆ ಅಟ್ಟಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಹೋರಾಟ ಮುಂದುವರಿಯಲಿದೆ. ಡ್ರಗ್ಸ್ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸಲಾಗುತ್ತಿದ್ದು, ಸಾರ್ವಜನಿಕರ ಬೆಂಬಲದೊಂದಿಗೆ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ತನಿಖೆ, ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಅಗತ್ಯತೆಗಳಿಗೆ ಅನುಗುಣವಾಗಿ ಪೊಲೀಸ್ ಪಡೆಯಲ್ಲಿ ಸುಧಾರಣೆ ತರುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.