ನವದೆಹಲಿ: ಐಐಟಿಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದ 'ಜೆಇಇ-ಅಡ್ವಾನ್ಸ್‌ಡ್ 2025' ಪರೀಕ್ಷೆಗೆ ಹಾಜರಾಗಲು 2023ರಲ್ಲಿ 12ನೇ ತರಗತಿ ಉತ್ತೀರ್ಣರಾದವರಿಗೂ ಅವಕಾಶ ನೀಡುವಂತೆ ನಿರ್ದೇಶಿಸಲು ಕೋರಿದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರು ಇದ್ದ ನ್ಯಾಯಪೀಠ, ಏಪ್ರಿಲ್ 21ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಜಂಟಿ ಪ್ರವೇಶ ಮಂಡಳಿ (ಜೆಎಬಿ) ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿತು.
ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆಗಳನ್ನು ಜೆಎಬಿ ನಡೆಸುತ್ತದೆ. 18 ಮಂದಿ ಐಐಟಿ ಪ್ರವೇಶಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರು 2023ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದಾರೆ.
ಜೆಇಇ-ಅಡ್ವಾನ್ಸ್‌ಡ್‌ಗೆ ಸಂಬಂಧಿಸಿದ ಅರ್ಹತೆ ಮಾನದಂಡಗಳನ್ನು ಪರಿಷ್ಕರಿಸಲಾಗಿದೆ. 2024 ಹಾಗೂ 2025ರಲ್ಲಿ 12ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಈ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಜೆಇಇ-ಮೇನ್ಸ್ ಹಾಗೂ ಜೆಇಇ-ಅಡ್ವಾನ್ಸ್‌ಡ್‌ಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಕೂಡ ತಾರತಮ್ಯದಿಂದ ಕೂಡಿದ್ದು, ಅವುಗಳನ್ನು ರದ್ದುಗೊಳಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.