ನವದೆಹಲಿ: ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ ₹ 8.56 ಲಕ್ಷ ಕೋಟಿಗೆ (100 ಶತಕೋಟಿ ಡಾಲರ್) ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಬಹುಧ್ರುವೀಯ ಯುಗದಲ್ಲಿ ಭಾರತ ಮತ್ತು ರಷ್ಯಾ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
'ರಷ್ಯಾ ಮತ್ತು ಭಾರತ: ಹೊಸ ದ್ವಿಪಕ್ಷೀಯ ಕಾರ್ಯಸೂಚಿ ಕಡೆಗೆ' ಕುರಿತು ರಷ್ಯಾದ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿ ಮತ್ತು ಮಾಸ್ಕೊದಲ್ಲಿನ ಭಾರತೀಯ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಅವರು ವಿಡಿಯೊ ಭಾಷಣ ಮಾಡಿದ್ದಾರೆ.
ವೇಗವಾಗಿ ರಚನೆಯಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ಎರಡೂ ದೇಶಗಳು ನಾಜೂಕಿನಿಂದ ಮುಂದೆ ಸಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ರಷ್ಯಾದ ನಡುವೆ ಆಳವಾದ ಸಂಬಂಧ ಇದೆ. ಎರಡೂ ದೇಶಗಳು ಈ ಸ್ನೇಹವನ್ನು ಮತ್ತಷ್ಟು ಬಲಪಡಿಸಿಕೊಂಡು ಮುಂದೆ ಸಾಗಲು ಬದ್ಧವಾಗಿವೆ ಎಂದಿದ್ದಾರೆ.
ಉಭಯ ದೇಶಗಳು ಇಂಧನ, ರಕ್ಷಣೆ, ನಾಗರಿಕ ಪರಮಾಣು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಅಲ್ಲದೆ ವ್ಯಾಪರ, ತಂತ್ರಜ್ಞಾನ, ಕೃಷಿ, ಔಷಧ, ಸಂಪರ್ಕ ಮತ್ತು ಡಿಜಿಟಲ್ ಆರ್ಥಿಕತೆಯತ್ತಲೂ ಇನ್ನಷ್ಟು ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.