ನವದೆಹಲಿ: ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ಲೆಕ್ಕಹಾಕಲು ವೈಜ್ಞಾನಿಕವಾಗಿ ಮೃತರ ವಯಸ್ಸು ಪರಿಗಣಿಸಲು ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧಾರವಾಗಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದು, ಕಲ್ಯಾಣ ಉದ್ದೇಶದ ಕಾಯ್ದೆ. ಪರಿಹಾರ ಘೋಷಿಸುವುದು ಕೋರ್ಟ್‌ನ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನ್‌ಉಲ್ಲಾ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಅಲ್ಲದೆ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ₹5.96 ಲಕ್ಷದಿಂದ ₹13.82 ಲಕ್ಷಕ್ಕೆ ಏರಿಸಿ ಆದೇಶಿಸಿತು.
ಮೃತರ ವಯಸ್ಸು ಕುರಿತು ತೀರ್ಮಾನಿಸುವಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2015ರ ಮಾರ್ಚ್ 19ರಂದು ನೀಡಿದ್ದ ತೀರ್ಪಿನಲ್ಲಿ ಲೋಪವಾಗಿದೆ. ಮೃತ ಮಹಿಳೆ ವಯಸ್ಸನ್ನು 45ರ ಬದಲಿಗೆ 60 ಎಂದು ಪರಿಗಣಿಸಲಾಗಿದೆ ಎಂದು ಹೇಳಿತು.
'ವಯಸ್ಸಿನ ಖಾತರಿಗಾಗಿ ಪೂರಕವಾದ ದಾಖಲೆ ಇಲ್ಲದಾಗ, ಮರಣೋತ್ತರ ಪರೀಕ್ಷೆಯ ವರದಿಯನ್ನೇ ಪರಿಗಣಿಸಲು ಹಿಂಜರಿಕೆ ಬೇಡ. ಈ ಪ್ರಕರಣದಲ್ಲಿ ಮೃತಳ ವಯಸ್ಸನ್ನು 45 ಎಂದೇ ಪರಿಗಣಿಸಿ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ' ಎಂದು ಪೀಠವು ತಿಳಿಸಿತು.
2003ರ ಫೆ.7ರಂದು ಅಪಘಾತ ಸಂಭವಿಸಿದ್ದು ಲಾರಿ ಡಿಕ್ಕಿ ಹೊಡೆದು ಮಹಿಳೆ ತಾರಾವತಿ ಮೃತಪಟ್ಟಿದ್ದರು. ಮೋಟಾರು ಅಪಘಾತ ವ್ಯಾಜ್ಯ ನ್ಯಾಯಮಂಡಳಿಯು 2015ರ ಆ.31ರಂದು ಶೇ 7ರ ಬಡ್ಡಿಯೊಂದಿಗೆ ₹ 4.31 ಲಕ್ಷ ಪರಿಹಾರ ಘೋಷಿಸಿ ಆದೇಶಿಸಿತ್ತು. ಈ ಸಂಬಂಧ ಮೇಲ್ಮನವಿ ಪರಿಗಣಿಸಿದ್ದ ಹೈಕೋರ್ಟ್ ಪರಿಹಾರದ ಮೊತ್ತವನ್ನು ನಂತರ ₹1.65 ಲಕ್ಷದಷ್ಟು ಹೆಚ್ಚಿಸಿತ್ತು.