ನವದೆಹಲಿ: ನರೇಗಾ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು (APBS) ಕಡ್ಡಾಯ ಮಾಡುವ ಮಾದಲು ಆಯ್ಕೆಗೆ ಬಿಡಬೇಕು ಮತ್ತು ಅವರಿಗೆ ಸರಿಯಾದ ವೇತನ ಸಿಗುವಂತೆ ನೋಡಿಕೊಳ್ಳಲು ಪರ್ಯಾಯ ಪಾವತಿ ಕಾರ್ಯವಿಧಾನಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಸಂಸದೀಯ ಸಮಿತಿಯ ವರದಿ ಒತ್ತಾಯಿಸಿದೆ.
ಅನುದಾನಗಳಿಗೆ ಬೇಡಿಕೆಗಳ (2025-26) ಕುರಿತು ಲೋಕಸಭೆಯಲ್ಲಿ ಸಲ್ಲಿಸಲಾದ ವರದಿಯು, ನಿಜವಾದ ಫಲಾನುಭವಿಗಳನ್ನು ಹೊರಗಿಡಲು ಕಾರಣವಾದ ಕಾರ್ಯಾಚರಣೆಯ ಸವಾಲುಗಳಿಂದಾಗಿ ತಾಂತ್ರಿಕ ಹಸ್ತಕ್ಷೇಪವನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದೆ. ಅನೇಕ ಸಂದರ್ಭಗಳಲ್ಲಿ ಆಧಾರ್ ಮತ್ತು ಜಾಬ್ ಕಾರ್ಡ್ ದಾಖಲೆಗಳ ನಡುವಿನ ವ್ಯತ್ಯಾಸಗಳಿಂದಾಗಿ ಕಾರ್ಮಿಕರನ್ನು ವ್ಯವಸ್ಥೆಯಿಂದ ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕಾ ನೇತೃತ್ವದ ಸಮಿತಿಯು ಹೇಳಿದೆ.
ಎಬಿಪಿಎಸ್ ಐಚ್ಛಿಕವಾಗಿಯೇ ಉಳಿದು ಪರ್ಯಾಯ ಪಾವತಿ ಕಾರ್ಯವಿಧಾನಗಳು ಲಭ್ಯವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಖಚಿತಪಡಿಸಿಕೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಇದು ಆಧಾರ್ ಕಾರ್ಡ್ ಇಲ್ಲದ ಕಾರ್ಮಿಕರು ಅಥವಾ ಬಯೋಮೆಟ್ರಿಕ್ ದೃಢೀಕರಣ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ವೇತನಕ್ಕೆ ಧಕ್ಕೆಯಾಗದಂತೆ ತಮ್ಮ ವೇತನವನ್ನು ಪಡೆಯುವುದನ್ನು ಮುಂದುವರಿಸಲು ಸಹಾಯವಾಗುತ್ತದೆ.
ಸಮಿತಿ ಮತ್ತೊಂದು ಪ್ರಸ್ತಾವನೆ ಮಾಡಿದ್ದು, ಅದರಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಖಾತರಿಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು ಪ್ರಸ್ತುತ 100 ದಿನಗಳಿಂದ ಕನಿಷ್ಠ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಸಮಿತಿ ಹೇಳಿದೆ. ನರೇಗಾ ಅಡಿಯಲ್ಲಿ ಖಾತರಿಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು 150 ದಿನಗಳಿಗೆ ಹೆಚ್ಚಿಸುವಂತಹ ರೀತಿಯಲ್ಲಿ ಮತ್ತು ಕಾರ್ಯವಿಧಾನಗಳ ಮೂಲಕ ನರೇಗಾ ಅಡಿಯಲ್ಲಿ ಕೆಲಸಗಳ ಸ್ವರೂಪವನ್ನು ಮತ್ತಷ್ಟು ವೈವಿಧ್ಯಗೊಳಿಸುವುದು ಈಗಿನ ಅಗತ್ಯವಾಗಿದೆ ಎಂದು ಹೇಳಿದೆ.